Connect with us

    KARNATAKA

    ಕೆಜಿಎಫ್‌ ಮ್ಯೂಸಿಕ್‌ ಬಳಸಿದ ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಬೆಂಗಳೂರು, ನವೆಂಬರ್ 08: ಹಾಡಿನ ಕಾಪಿರೈಟ್‌ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌  ಕೋರ್ಟ್‌ ಟ್ವಿಟ್ಟರ್‌ ಕಂಪನಿಗೆ ಆದೇಶ ನೀಡಿದೆ.

    ಭಾರತ್‌ ಜೋಡೋ ಯಾತ್ರೆಯ ಪ್ರಚಾರದಲ್ಲಿ ಕೆಜಿಎಫ್‌ ಚಾಪ್ಟರ್‌-2 ಸಿನಿಮಾದ ಆಡಿಯೋವನ್ನು ಬಳಸಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸ್ಟುಡಿಯೋ ಕೋರ್ಟ್‌ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಆದೇಶಿಸಿದೆ.

    ಮೂಲಹಾಡನ್ನು ಸಿಂಕ್ರೊನೈಸ್ ಮಾಡಿದ ಆವೃತ್ತಿಯೊಂದಿಗೆ ಸೇರಿಸಲಾಗಿದೆ. ಈ ಕೃತ್ಯಕ್ಕೆ ಪ್ರೋತ್ಸಾಹ ನೀಡಿದರೆ ಛಾಯಾಗ್ರಹಣ ಚಲನಚಿತ್ರಗಳು, ಹಾಡುಗಳು, ಸಂಗೀತ ಆಲ್ಬಮ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ವ್ಯವಹಾರದಲ್ಲಿ ತೊಡಗಿರುವ ಉದ್ಯಮಗಳಿಗೆ ಸಮಸ್ಯೆಯಾಗಬಹುದು. ಅಲ್ಲದೇ ಇದು ಪೈರಸಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಎಂಆರ್‌ಟಿ ಪರ ವಕೀಲರು, ನಮ್ಮ ಸಂಗೀತವನ್ನು ಕಾನೂನುಬಾಹಿರವಾಗಿ ಬಳಸಿ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌, ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌ ಖಾತೆಯ ಎಲೆಕ್ಟ್ರಾನಿಕ್ ಆಡಿಟ್ ಅನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸುವುದು ಅಗತ್ಯ ಎಂದು ವಾದಿಸಿದರು.

    ಈ ವಾದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ, ಆಯುಕ್ತರನ್ನು ನೇಮಿಸದಿದ್ದರೆ ತಡೆಯಾಜ್ಞೆ ನೀಡುವ ಉದ್ದೇಶ ಸೋಲುತ್ತದೆ ಎಂದು ಅಭಿಪ್ರಾಯಪಟ್ಟಿತು. ಕೋರ್ಟ್‌ ಮುಂದಿನ ವಿಚಾರಣೆಯನ್ನು ನ.21ಕ್ಕೆ ಮುಂದೂಡಿತು.

    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವ MRT ಸಂಸ್ಥೆಯು ರಾಹುಲ್ ಗಾಂಧಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಕೆಜಿಎಫ್‌ ಹಾಡನ್ನು ಕಾಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ಟಿಟ್ಟರ್‌, ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಳಸಲಾಗಿದೆ. ನಮ್ಮ ಸಂಸ್ಥೆಯ ಅನುಮತಿ ಪಡೆಯದೇ ಕಾಪಿರೈಟ್‌ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಸ್ಥೆ ಕೋರ್ಟ್‌ ಮೊರೆ ಹೋಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply