Connect with us

    LATEST NEWS

    ಇಂದು ಸಂಜೆ ಆಗಸದಲ್ಲಿ ನಡೆಯಲಿದೆ ಗುರು ಶನಿ ಸಮಾಗಮ

    ಉಡುಪಿ ಡಿಸೆಂಬರ್ 21: 20 ವರ್ಷಗಳಿಗೊಮ್ಮೆ ನಡೆಯುವ ಸೌರವ್ಯೂಹ ಕೌತುಕ  ಗುರು ಮತ್ತು ಶನಿ ಗ್ರಹಗಳ ಸಾಮೀಪ್ಯ ದೃಶ್ಯವನ್ನು ಇಂದು ಸಂಜೆ 6.15 ರಿಂದ 8ರವರೆಗೆ ಕಣ್ತುಂಬಿಕೊಳ್ಳಬಹುದು. ಗುರು ಹಾಗು ಶನಿಯ ಸಾಮೀಪ್ಯವನ್ನು ಒಂದು ವಿಶೇಷವಾದ ಖಗೋಳ ವಿದ್ಯಮಾನ ಎನ್ನಬಹುದಾಗಿದ್ದು, ಇದನ್ನು ಗ್ರೇಟ್ ಕಂಜಂಕ್ಷನ್ ಎನ್ನಲಾಗುತ್ತದೆ.

    ಭೂಮಿಯಿಂದ ಸೂರ್ಯನಿಗಿರುವ ದೂರದ 5 ರಷ್ಟು ದೂರದಲ್ಲಿ ಗುರುಗ್ರಹವಿದ್ದು, ಗುರುವು ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷ ಬೇಕು. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳು ಬೇಕು. ಈ ಎರಡು ಗ್ರಹಗಳು ಸಮೀಪಿಸಲು ಕನಿಷ್ಠ 20 ವರ್ಷಗಳು ಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.

    ಗುರು ಹಾಗೂ ಶನಿ ಗ್ರಹಗಳು ಒಂದೇ ಸಮತಲದಲ್ಲಿ ಪರಿಭ್ರಮಿಸುವುದಿಲ್ಲ. ಪ್ರತಿ ಸಮಾಗಮದಲ್ಲಿ ಅಂತರವು ಬದಲಾಗುತ್ತಿರುತ್ತದೆ. ಖಗೋಳಶಾಸ್ತ್ರದಲ್ಲಿ ಈ ಅಂತರಗಳನ್ನು ಕೋನಾಂತರದಲ್ಲಿ ಅಳೆಯಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ವರನು ವಧುವಿಗೆ ಅರುಂಧತಿ ಹಾಗು ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಶಾಸ್ತ್ರವಿದೆ. ಅಲ್ಲಿ ಎರಡು ನಕ್ಷತ್ರಗಳು ತುಂಬ ಹತ್ತಿರದಲ್ಲಿ ಜೋಡಿ ನಕ್ಷತ್ರಗಳಂತೆ ಕಾಣುತ್ತದೆ. ಇವುಗಳ ನಡುವಿನ ಅಂತರ 0.2 ಡಿಗ್ರಿಗಳಿರುತ್ತದೆ. ಆದರೆ, ಈಗ ಕಾಣುವ ಗುರು ಶನಿ ಗ್ರಹದ ನಡುವಿನ ಅಂತರ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳ ಅಂತರದ ಅರ್ಧದಷ್ಟಿರುತ್ತದೆ.


    2040ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ವೀಕ್ಷಿಸಬಹುದಾಗಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, ಈಗ ನೋಡದಿದ್ದರೆ ಮತ್ತೊಮ್ಮೆ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು. ಹಿಂದೆ, 1623ರಲ್ಲಿ ಇದೇ ರೀತಿಯ ವಿದ್ಯಮಾನ ನಡೆದಿತ್ತು. ಅದಕ್ಕಿಂತ ಹಿಂದೆ 1,226 ರಲ್ಲಿ ಕಂಡಿತ್ತು.

    ಈ ಜೋಡಿ ಗ್ರಹಗಳು ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ. ಎರಡು ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ನಂತರ ನೈರುತ್ಯದಲ್ಲಿ ಅಸ್ತವಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ 21ರಂದು ಸಂಜೆ 6ಗಂಟೆಗೆ ಈ ಗ್ರಹಗಳ ವೀಕ್ಷಣೆ ಆಯೋಜಿಸಲಾಗಿದೆ. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಯುಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *