MANGALORE
ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನ ಉದ್ಘಾಟನೆ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿದ ‘ವಿಶ್ವ ಸಂಸ್ಕೃತ ಸಮ್ಮೇಳನ’ವನ್ನು ಫೆಬ್ರವರಿ 24 ರಂದು ವಿಶ್ವ ವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಉಡುಪಿ ಕಾಣಿಯೂರು ಮಠಾಧೀಶರಾದ ಜಗದ್ಗುರು ಶ್ರೀ ಮಧ್ವಚಾರ್ಯ ಮೂಲ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಮಾನವೀಯತೆಗೆ ಭಾರತೀಯ ಜ್ಞಾನ ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ, ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿದೆ.

ಆಶೀರ್ವಚನ ನೀಡುತ್ತಾ ಕಾಣಿಯೂರು ಮಠಾಧೀಶರು ಮಾತನಾಡಿ, ಸಂಸ್ಕೃತ ಭಾಷಾ ಮಹತ್ವ ಹಾಗೂ ಪ್ರಪಂಚಕ್ಕೆ ಸಂಸ್ಕೃತದ ಕೊಡುಗೆ ಈ ಸಮ್ಮೇಳನದ ಮೂಲಕ ಇನ್ನಷ್ಟು ಜನರಿಗೆ ತಲುಪಲಿ. ವಿಶ್ವ ಸಂಸ್ಕೃತ ಸಮ್ಮೇಳನ ಆಯೋಜಿಸುವ ಮೂಲಕ ಸಂಸ್ಕೃತ ಭಾಷೆಗೆ ಹಾಗೂ ಸಂಸ್ಕೃತಿಗೆ ಡಾ.ಸಿಎ ಎ. ರಾಘವೇಂದ್ರ ರಾವ್ ಅವರ ಕೊಡುಗೆ ಅಭಿನಂದನಾರ್ಹ ಎಂದರು. ಶಾಸಕ ಡಾ . ಭರತ್ ಶೆಟ್ಟಿ ಮಾತನಾಡಿ, ಎಲ್ಲರೂ ಹುಟ್ಟು ವಿಜ್ಞಾನಿಗಳು ನಮ್ಮ ಹಿರಿಯರು ಹಿಂದೆ ಮಾಡಿರುವ ಸಾಧನೆಗಳ ಸಂಶೋಧನೆಯಾಗಬೇಕು. ವಿದ್ಯಾರ್ಥಿಗಳಿಗೆ ಹಿರಿಯರು ಸಮಾಜಕ್ಕೆ ನೀಡಿರುವ ಸಾಧನೆ ಈ ಸಮ್ಮೇಳನದ ಮೂಲಕ ತಿಳಿಯುತ್ತಿರುವುದು ಸಂತೋಷ ಎಂದರು.
ಎನ್ಎಂಪಿಎ ಅಧ್ಯಕ್ಷರಾದ ಡಾ.ವೆಂಕಟ ರಮಣ ಅಕ್ಕರಾಜು ಮಾತನಾಡಿ, ಸಂಸ್ಕೃತ ಭಾಷೆ ಕೇವಲ ಭಾಷೆಯಲ್ಲ ಇದು ವಿಜ್ಞಾನ – ತಂತ್ರಜ್ಞಾನದ ಭಾಷೆ ಹಾಗೂ ಅಖಂಡ ಭಾರತದ ಬೆನ್ನೆಲುಬು. ವಿದೇಶಿಯರು ಕೂಡಾ ಸಂಸ್ಕೃತ ಕೃತಿಗಳನ್ನು ಅಧ್ಯಯನ ನಡೆಸುತ್ತಾ ಸಂಶೋಧನೆ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಅಭಿನಂದನಾರ್ಹ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರ ರಾವ್ ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯ ಸಂಸ್ಕೃತ ಭಾಷೆ ಬೆಳವಣಿಗೆಗೆ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ, ಮುಂದೆಯೂ ನೀಡಲಿದೆ. ಸಂಸ್ಕೃತ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸರಕಾರದಿಂದ ಭಾಷಾ ಬೆಳಣಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಂಸ್ಕೃತದಲ್ಲಿ ಯೋಚನೆಯನ್ನು ಅಭಿವೃದ್ಧಿಗೊಳಿಸಿ ಕಾರ್ಯಗತಕ್ಕೆ ತಂದಾಗ ಸಂಸ್ಕೃತ ಭಾಷೆಯು ನಿರರ್ಗಳವಾಗಿ ಎಲ್ಲರೂ ಕಲಿತು ಮಾತನಾಡಬಹುದು ಎಂದು ಸಲಹೆ ನೀಡಿದರು.