FILM
ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
ಬೆಂಗಳೂರು, ಅಕ್ಟೋಬರ್ 10: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಸತ್ಯಜಿತ್ (72) ನಿಧನರಾಗಿದ್ದಾರೆ.
ಸಾಮಾನ್ಯ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸತ್ಯಜಿತ್ ಅವರು ಕೆಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಲನಚಿತ್ರರಂಗ ಕಂಬನಿ ಮಿಡಿದಿದೆ.ಹಲವು ಜನಪ್ರಿಯ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಸತ್ಯಜಿತ್ ನಟಿಸಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಕಳೆದುಕೊಂಡಿದ್ದರು.
ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್, ಇವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಸತ್ಯಜಿತ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆ ಪೋಷಕ ನಟರಾಗಿ ಗುರುತಿಸಿಕೊಂಡಿದ್ದರು. ನೆಗೆಟಿವ್ ಪಾತ್ರ ಕೊಟ್ಟರೂ, ಅಷ್ಟೇ ಖಡಕ್ ಆಗಿ ಅಭಿನಯಿಸಿದ್ದರು.
ಪುಟ್ನಂಜ (1995), ಶಿವ ಮೆಚ್ಚಿದ ಕಣ್ಣಪ್ಪ (1988), ಚೈತ್ರಾದ ಪ್ರೇಮಾಂಜಲಿ ( 1992), ಆಪ್ತಮಿತ್ರ (2004) ಇವು ಸತ್ಯಜಿತ್ ಅವರು ನಟಿಸಿದ ಪ್ರಮುಖ ಚಲನ ಚಿತ್ರಗಳಾಗಿದೆ. ಅರುಣ ರಾಗ, ಅಂತಿಮ ತೀರ್ಪು, ರಣರಂಗ, ನಮ್ಮೂರ ರಾಜ, ನ್ಯಾಯಕ್ಕಾಗಿ ನಾನು, ಯುದ್ಧಕಾಂಡ, ಇಂದ್ರಜಿತ್, ನಮ್ಮೂರ ಹಮ್ಮೀರ, ಪೊಲೀಸ್ ಲಾಕಪ್, ಮನೆದೇವ್ರು, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಸರ್ಕಲ್ ಇನ್ಸ್‌ಪೆಕ್ಟರ್, ಪಟೇಲ, ದುರ್ಗದ ಹುಲಿ, ಅಪ್ಪು, ಧಮ್, ಅಭಿ, ಅರಸು, ಇಂದ್ರ, ಭಾಗ್ಯದ ಬಳೇಗಾರ, ಕಲ್ಪನಾ, ಗಾಡ್ ಫಾದರ್, ಲಕ್ಕಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ.