LATEST NEWS
ಶಬರಿಮಲೆಯಲ್ಲಿ ಭಕ್ತರಿಗೆ ಅನ್ನ, ನೀರು, ಶೌಚ ವ್ಯವಸ್ಥೆ ಕಲ್ಪಿಸಲೂ ಕೇರಳ ಸರ್ಕಾರ ವಿಫಲ
ಶಬರಿಮಲೆ ಡಿಸೆಂಬರ್ 26: ಈ ಬಾರಿ ಶಬರಿಮಲೆ ಯಾತ್ರೆ ನಿಭಾಯಿಸುವಲ್ಲಿ ಕೇರಳ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇರಳ ಹೈಕೋರ್ಟ್ ಭಾರಿ ಭಾರಿ ಆದೇಶ ನೀಡಿದರೂ ಕೂಡ ಯಾವುದೇ ರೀತಿಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ.
ಈ ನಡುವೆ ನೀರಿಲ್ಲ. ಹಸಿವಾಗುತ್ತಿದ್ದರೂ ತಿನ್ನಲು ಅನ್ನವಿಲ್ಲ. ಅಷ್ಟೇ ಏಕೆ ಕನಿಷ್ಠ ಪಕ್ಷ ನಮಗೆ ಶೌಚದ ವ್ಯವಸ್ಥೆ ಕೂಡ ಇಲ್ಲ, ಆ ಸಿಎಂ ಪಿಣರಾಯಿ ವಿಜಯನ್ ಇದನ್ನೆಲ್ಲ ನೋಡಲ್ವ? ಅಯ್ಯೋ ನಿಮ್ಮ ಕೈ ಮುಗಿತೀವಿ ದಯವಿಟ್ಟು ಯಾರೂ ಶಬರಿಮಲೆಗೆ ಬರಬೇಡಿ ಎಂದು ಕೇರಳದ ಶಬರಿಮಲೆಯಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕನ್ನಡಿಗ ಭಕ್ತರ ತಿಳಿಸಿದ್ದಾರೆ.
ಈ ಬಾರಿ ಶಬರಿಮಲೆಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದ್ದು, ಭಕ್ತರಿಗೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿಯೂ ಕೇರಳ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಭಕ್ತಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಶಬರಿಮಲೆ ತೆರಳಿದ್ದ ಭಕ್ತರು ನಮಗೆ ಇಲ್ಲಿ ಕನಿಷ್ಠ ಶೌಚಾಲಯ ವ್ಯವಸ್ಥೆಯೂ ಇಲ್ಲ. ಕುಡಿಯಲು ನೀರಿಲ್ಲ, ಊಟ ಮಾಡಲು ಏನೂ ಆಹಾರವಿಲ್ಲ. ಅಯ್ಯೋ ನಿಮ್ಮ ಕೈ ಮುಗೀತಿವಿ ಇನ್ನು ಶಬರಿಮಲೆಗೆ ದಯವಿಟ್ಟು ಯಾರೂ ಬರಬೇಡಿ. ಪೊಲೀಸರು ಕೂಡ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ, ದಾದಾಗಿರಿ ಮಾಡ್ತಿದ್ದಾರೆ. ಇಂಥ ಅವ್ಯವಸ್ಥೆಗೆ ಈ ಕೇರಳ ಸರ್ಕಾರಕ್ಕೆ ನಾಚಿಕೆಯಾಗಬೇಕು.
ಶಬರಿಮಲೆಗೆ ಹೋಗುವ ರಸ್ತೆಗಳಲ್ಲಿ ಭಕ್ತರು ಸುಮಾರು 12 ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಸಿಲುಕಿಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಭಕ್ತಾದಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಶಬರಿಮಲೆ ಅಯ್ಯಪ್ಪ ದೇಗುಲದ ಮಂಡಳಿಗೆ ಕೇರಳ ಹೈಕೋರ್ಟ್ ಸೂಚಿಸಿದೆ. ಸೋಮವಾರ ನ್ಯಾಯಾಲಯದ ವಿಶೇಷ ಪೀಠವು ‘ವಾರ್ಷಿಕ ಶಬರಿಮಲೆ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆ ಗೆ ಬರುವ ಭಕ್ತಾದಿಗಳಿಗಾಗಿ ‘ಎಡತಾವಲಮ್’ನಲ್ಲಿ ಅಲ್ಪಾವದಿ ತಂಗುದಾಣ, ನೀರು, ಊಟ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಗೆ ನಿರ್ದೇಶನ ನೀಡಿದೆ. ಅಲ್ಲದೇ ಜನಸಂದಣಿ ನಿಯಂತ್ರಣ ಮತ್ತು ಇತರ ಮೇಲ್ವಿಚಾರಣೆಗೆ ಅಗತ್ಯ ಬಿದ್ದರೆ ಹೆಚ್ಚಿನ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ಅವ್ಯವಸ್ಥೆ, ಗದ್ದಲ, ಆಕ್ರೋಶಗಳ ನಡುವೆಯೇ ಭಾನುವಾರ ಬರೋಬ್ಬರಿ ದಾಖಲೆಯ 1.2 ಲಕ್ಷ ಭಕ್ತಾದಿಗಳು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.