LATEST NEWS
ಬೀದಿ ವ್ಯಾಪಾರಿಗಳಿಗೆ ಕಾದಿದೆ ಆಪತ್ತು ; ಬರ್ತಿದೆ ಟೈಗರ್ !

ಫುಟ್ಪಾತ್ ವ್ಯಾಪಾರಕ್ಕೆ ಬ್ರೇಕ್ ಹಾಕೀತೇ ಬಿಜೆಪಿ ಆಡಳಿತ ?
ಮಂಗಳೂರು, ಜೂನ್ 4 : ಮಂಗಳೂರು ಫುಟ್ಪಾತ್ ವ್ಯಾಪಾರಕ್ಕೆ ಕುಪ್ರಸಿದ್ಧಿ ಪಡೆದಿರೋ ನಗರ. ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು ಫುಟ್ಪಾತ್ ಗಳಲ್ಲಿಯೇ ಹಣ್ಣು , ತರಕಾರಿ, ಹೂವುಗಳನ್ನಿಟ್ಟು ವ್ಯಾಪಾರ ನಡೆಸುತ್ತಾರೆ. ಆದರೆ, ಜೂನ್ 5ರಿಂದ ಇಂಥ ವ್ಯಾಪಾರಕ್ಕೆ ಅವಕಾಶ ಕೊಡಲ್ಲ ಎಂದು ಮಂಗಳೂರು ಮೇಯರ್ ದಿವಾಕರ್ ಎಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ಮೇಯರ್ ಗದ್ದುಗೆಗೇರಿರುವ ದಿವಾಕರ್ ಪಾಂಡೇಶ್ವರ, ಈ ಆದೇಶವನ್ನು ಖಡಕ್ಕಾಗಿ ಜಾರಿಗೆ ತಂದರೆ ಫುಟ್ಪಾತ್ ಅತಿಕ್ರಮಣ ತಡೆಯುವಲ್ಲಿ ಕ್ರಾಂತಿಕಾರಿ ನಡೆಯಾಗಲಿದೆ. ಮಂಗಳೂರಿನ ಹೆಚ್ಚಿನ ಬೀದಿಗಳಲ್ಲಿ ತರಕಾರಿ, ಜೀನಸು ಅಂಗಡಿ ವ್ಯಾಪಾರಸ್ಥರು ಅತಿಕ್ರಮಿಸಿರುವುದು ಇಂದು ನಿನ್ನೆಯ ವಿಷಯವಲ್ಲ. ಅದೆಷ್ಟೋ ವರ್ಷಗಳಿಂದಲೂ ಫುಟ್ಪಾತ್ ವ್ಯಾಪಾರ ಗಡದ್ದಾಗಿಯೇ ನಡೆದಿದೆ.

ಪಾಲಿಕೆಯಲ್ಲಿ ಯಾವುದೇ ಪಕ್ಷದ ಅಧಿಕಾರ ಬಂದರೂ, ಬೀದಿ ವ್ಯಾಪಾರಿಗಳ ಬವಣೆಯನ್ನೂ ಕೇಳಿಲ್ಲ. ಫುಟ್ಪಾತ್ ಅತಿಕ್ರಮಣ ಮಾಡಿದ ವ್ಯಾಪಾರಸ್ಥರನ್ನು ತೆರವು ಮಾಡಿದ ನಿದರ್ಶನವೂ ಇಲ್ಲ. ಮಂಗಳೂರಿನ ಯಾವುದೇ ಬೀದಿಗೆ ಹೋದರೂ, ಅಲ್ಲೆಲ್ಲಾ ಫುಟ್ಪಾತ್ ಅತಿಕ್ರಮಣ ಎಗ್ಗಿಲ್ಲದೇ ನಡೆದಿರುವುದು ಕಣ್ಣಿಗೆ ರಾಚುತ್ತದೆ.
ಇದೇ ಕಾರಣದಿಂದ ಚರಂಡಿಗಳಲ್ಲಿ ಹೂಳು ತುಂಬಿ, ಕೆಲವು ಕಡೆ ಚರಂಡಿಗಳನ್ನೂ ಅತಿಕ್ರಮಿಸಿರುವ ಕಾರಣದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ನೀರು ಹರಿಯದೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ರಸ್ತೆಗಳೇ ತೋಡುಗಳ ರೀತಿ ಹರಿಯೋದನ್ನು ನೋಡಿಕೊಂಡೇ ಜನ, ಜನಪ್ರತಿನಿಧಿಗಳು ತಿರುಗಾಡುತ್ತಾರೆ.
ಬಂದರು, ಸ್ಟೇಟ್ ಬ್ಯಾಂಕ್ ವೃತ್ತ, ಹಂಪನಕಟ್ಟೆ , ಸೆಂಟ್ರಲ್ ಮಾರುಕಟ್ಟೆ ಆವರಣ ಹೀಗೆ ಫುಟ್ಪಾತ್ ವ್ಯಾಪಾರಿಗಳ ಲಿಸ್ಟ್ ಭಾರೀ ದೊಡ್ಡದಿದೆ. ಪ್ರತಿ ಬಾರಿ ಇಂಥ ಮಾತು ಕೇಳಿಬಂದರೂ, ಕೊನೆಕ್ಷಣದಲ್ಲಿ ಆಡಳಿತಗಾರರು ಸುಮ್ಮನಾಗಿದ್ದು ಮಾತ್ರ.
ಈಗ ಅಂಥ ಫುಟ್ಪಾತ್ ಅತಿಕ್ರಮಿಗಳು ಮತ್ತು ಬೀದಿ ವ್ಯಾಪಾರಸ್ಥರ ವಿರುದ್ಧ ಜೂನ್ 5ರಿಂದ ಟೈಗರ್ ಕಾರ್ಯಾಚರಣೆ ನಡೆಸುವುದಾಗಿ ಮೇಯರ್ ದಿವಾಕರ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ಯಾಚರಣೆ ಸಂದರ್ಭದಲ್ಲಿ ವಶಕ್ಕೆ ಪಡೆದ ವಸ್ತುಗಳನ್ನು ಹಿಂದಿರುಗಿಸುವುದಿಲ್ಲ ಎನ್ನುವ ಸೂಚನೆಯನ್ನೂ ನೀಡಿದ್ದಾರೆ. ಮೇಯರ್ ಆದೇಶ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.