Connect with us

    LATEST NEWS

    ದ.ಕ. ಜಿಲ್ಲಾಡಳಿತದ ಮಹಾ ಎಡವಟ್ಟು – ಮುಂಬೈ‌ನಿಂದ ರೈಲಿನಲ್ಲಿ ಬಂದವರ ತಪಾಸಣೆಯೂ ಇಲ್ಲ, ಕ್ವಾರಂಟೈನೂ ಇಲ್ಲ …..?

     ಇನ್ಮುಂದೆ ಕೊರೊನಾ ಫ್ರೀ…..?

    ಮಂಗಳೂರು, ಜೂನ್ 4: ಮಹಾರಾಷ್ಟ್ರ ವಲಸಿಗರ ಮೇಲೆ ರಾಜ್ಯ ಸರಕಾರ ಕಟ್ಟುನಿಟ್ಟು ಮಾಡಿದ್ದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿಕೊಂಡಿದೆ. ದೆಹಲಿ- ಮುಂಬೈ- ಕೇರಳ ಸಂಪರ್ಕದ ರೈಲಿನಲ್ಲಿ ಇಂದು ಮುಂಜಾನೆ ಮುಂಬೈನಿಂದ 30 ಜನ ಮಂಗಳೂರಿಗೆ ಆಗಮಿಸಿದ್ದು, ಅಧಿಕಾರಿಗಳು ಕ್ವಾರಂಟೈನ್ ಮಾಡದೆ ಮನೆಗೆ ಕಳಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    ಮುಂಜಾನೆ 3.30ಕ್ಕೆ ರೈಲು ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದು 30ರಷ್ಟು ಮಂದಿ ದಕ್ಷಿಣ ಕನ್ನಡ ಜಿಲ್ಲೆಯ ಮಂದಿಯಿದ್ದರು. ಮುಂಬೈನಿಂದ ಆಗಮಿಸಿದ್ದ ಈ ವಲಸಿಗರನ್ನು ತಪಾಸಣೆ ಮಾಡಲು ಯಾವುದೇ ಅಧಿಕಾರಿಗಳೂ ರೈಲು ನಿಲ್ದಾಣದಲ್ಲಿ ಇರಲಿಲ್ಲ. ಕನಿಷ್ಠ ಯಾರ್ಯಾರು ಬಂದಿದ್ದಾರೆ ಎಂಬ ಕನಿಷ್ಠ ಮಾಹಿತಿಯನ್ನೂ ಪಡೆಯದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಸ್ಥಳದಲ್ಲಿದ್ದ ಪೊಲೀಸರು, ಮುಂಬೈನಿಂದ ಬಂದವರನ್ನು ತಮ್ಮ ಮನೆಗಳಲ್ಲಿಯೇ ಕ್ವಾರಂಟೈನ್ ಇರುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆ ಸಿಕ್ಕಿದ್ದೇ ತಡ, ಮುಂಬೈನಿಂದ ಬಂದ ಜನ ಆಟೋ, ಬಸ್ ನಲ್ಲಿ ಹತ್ತಿಕೊಂಡು ತಮ್ಮ ಮನೆ ಸೇರಿದ್ದಾರೆ ! ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಈವರೆಗೆ ಲಾಕ್ ಡೌನ್ ನೆಪದಲ್ಲಿ ಮನೆಯಲ್ಲಿ ಕುಳಿತಿದ್ದು ಮಣ್ಣು ಪಾಲಾಗಿ ಹೋಯ್ತು.

    ಇಷ್ಟಕ್ಕೂ ಉಡುಪಿಯಲ್ಲಿ ಮಹಾರಾಷ್ಟ್ರದಿಂದ ಬಂದವರನ್ನು ಏಳು ದಿನಗಳ ಕ್ವಾರಂಟೈನ್ ಬಳಿಕ ಮನೆಗೆ ಬಿಟ್ಟಿದ್ದೇ ದೊಡ್ಡ ಎಡವಟ್ಟಿಗೆ ಕಾರಣವಾಗಿತ್ತು. ಮೇ 10ರಿಂದ 20 ರ ನಡುವೆ ಉಡುಪಿ ಜಿಲ್ಲೆ ಒಂದರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು. ಇದರಿಂದ ಕ್ವಾರಂಟೈನ್ ಸಾಧ್ಯವಾಗದೆ ಮಹಾರಾಷ್ಟ್ರದಿಂದ ಜನ ಬರುವುದನ್ನೇ ರಾಜ್ಯ ಸರಕಾರ ನಿರ್ಬಂಧಿಸಿತ್ತು. ಆನಂತ್ರ ಎರಡು ವಾರ ಕಳೆದರೂ ವರದಿ ಬರದೆ ಕ್ವಾರಂಟೈನ್ ನಲ್ಲಿದ್ದವರನ್ನು ಮನೆಗೆ ಬಿಟ್ಟು ಉಡುಪಿ ಜಿಲ್ಲಾಡಳಿತ ತಲೆ ಚಚ್ಚಿಕೊಳ್ಳುವಂತಾಗಿತ್ತು. ಯಾಕಂದ್ರೆ, ಮನೆಗೆ ತೆರಳಿದ ಬಹುಪಾಲು ಮಂದಿಯ ವರದಿ ಪಾಸಿಟಿವ್ ಆಗಿ ಮನೆಯವರಿಗೂ ಕೊರೊನಾ ಪ್ರಸಾದ ಹಂಚುವಂತಾಗಿತ್ತು.

    ಇದೆಲ್ಲ ಎಡವಟ್ಟು ಹಸಿರಾಗಿರುವಾಗಲೇ ಈಗ ಮುಂಬೈನಿಂದ ಬಂದ ಮೂವತ್ತರಷ್ಟು ಮಂದಿಯನ್ನು ಕ್ವಾರಂಟೈನ್ ಮಾಡೋದು ಬಿಟ್ಟು ಪರೀಕ್ಷೆಯನ್ನೇ ಮಾಡದೆ ಆಯಾ ಮನೆಗಳಿಗೆ ಕಳಿಸಿಕೊಟ್ಟು ಇಡೀ ಜಿಲ್ಲೆಯ ಜನರಿಗೆ ಕೊರೊನಾ ಹಂಚಲು ಪರೋಕ್ಷವಾಗಿ ಜಿಲ್ಲಾಡಳಿತ ಕಾರಣವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಜಿಲ್ಲೆಯಾದ್ಯಂತ ಕೊರೊನಾ ಹರಡುವ ಭೀತಿ ಎದುರಾಗಿದೆ. ವಿಶೇಷ ಅಂದರೆ, ಮುಂಬೈ ವಲಸಿಗರು ಹೀಗೆ ಜಿಲ್ಲೆಯ ವಿವಿಧೆಡೆ ತೆರಳಿದ್ದರೂ ಬೆಳಗ್ಗೆ 10 ಗಂಟೆ ಹೊತ್ತಿಗೆ ಮೂವರು ಸುರತ್ಕಲ್ ನಾಡ ಕಚೇರಿಗೆ ತೆರಳಿ ತಾವು ಮುಂಬೈನಿಂದ ಬಂದಿರುವುದನ್ನು ತಿಳಿಸಿದ್ದಾರೆ.

     

    ಒಂದೆಡೆ ರಾಜ್ಯ ಸರಕಾರ ಮಹಾರಾಷ್ಟ್ರದಿಂದ ಜನ ಬರುವುದನ್ನೇ ನಿರ್ಬಂಧಿಸಿದೆ. ಯಾರೇ ಅಕ್ರಮವಾಗಿ ಬಂದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಮೂರು ತಿಂಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿದ್ದು ಮುಂಬೈ ವಲಸಿಗರಿಂದ ಮಣ್ಣು ಪಾಲಾಗಬಾರದೆಂದು ಎಚ್ಚರಿಕೆ ವಹಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸ.

    Share Information
    Advertisement