FILM
ಅಜ್ಜರಕಾಡು ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಮುಂದಾದ ರಿಷಬ್ ಶೆಟ್ಟಿ

ಬೆಂಗಳೂರು ಅಕ್ಟೋಬರ್ 4: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ ಗಡಿ ಭಾಗದ ಶಾಲೆಗಳ ಹೀನಾಯ ಸ್ಥಿತಿಯನ್ನು ಬೆಳಕಿಗೆ ತಂದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಆಸ್ಪತ್ರೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾಗಿದ್ದು, ಸುಮಾರು 60 ವರ್ಷಗಳ ಹಳೆಯ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ನಾಗರೀಕ ಸಬಲೀಕರಣ ಗುಂಪಿನ ಜೊತೆ ಕೈಜೋಡಿಸಿದ್ದು, ಯುವ ಶಕ್ತಿ ಕರ್ನಾಟಕದೊಂದಿಗೆ ಕೆಲಸ ಮಾಡಿ ಸರ್ಕಾರಿ ಅಸ್ಪತ್ರೆ ಕಡೆಗೆ ಸಾರ್ವಜನಿಕರ ಗಮನ ಸೆಳೆಯಲು ಮುಂದಾಗಿದ್ದಾರೆ. ಈ ಆಸ್ಪತ್ರೆಯ ಪುನಶ್ಚೇತನ ಹಾಗೂ ನವೀಕರಣ ಮಾಡುವುದು ತೀವ್ರ ಅವಶ್ಯಕವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಕುರಿತು ರಿಷಬ್ ಶೆಟ್ಟಿ ಮಾತನಾಡಿದ್ದು, ಅಜ್ಜರಕಾಡು ಆಸ್ಪತ್ರೆ 60 ವರ್ಷಕ್ಕೂ ಹಳೆಯದು. ಹೀಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ತುಂಬಾ ಅವಶ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ 11 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಜಿಲ್ಲೆಯ ಜನರ ಆರೋಗ್ಯದ ಅಗತ್ಯತೆಗಳನ್ನು ಪೂರೈಸಲು, ತುರ್ತು ಹಾಗೂ ಗಂಭೀರ ಪ್ರಕರಣಗಳನ್ನು ನಿಭಾಯಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾದಿಂದಾಗಿ ಇಡೀ ದೇಶ ಸಾರ್ವಜನಿಕ ಆರೋಗ್ಯ ಸಮಸ್ಯೆಯಿಂದ ತತ್ತರಿಸಿದೆ. ಇಂತಹ ಸಮಯದಲ್ಲಿ ಸಹ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲ್ಯಭವನ್ನು ರೂಪಿಸಲು ಸಾಧ್ಯವಾಗಿಲ್ಲ. ಕೊರೊನಾದಿಂದಾಗಿ ನಮ್ಮ ಆರೋಗ್ಯ ಸೌಲಭ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಕೊರೊನಾ ಎತ್ತಿ ತೋರಿಸಿದೆ. ವೈರಸ್ ಎದುರಿಸಲು ಉತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಬೇಕಾಗಿದೆ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಜಾಗೃತಿ ಅಭಿಯಾನಗಳನ್ನು ಆರಂಭಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಇದು ಉಡುಪಿಗೆ ಮಾತ್ರ ಸೀಮಿತವಾದ ಕಾಳಜಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಗಾಗಿ ಉತ್ತಮ ಯೋಜನೆ ಇರಬೇಕು. ಪ್ರತಿ ಜಿಲ್ಲೆಯಲ್ಲೂ ಸಮಸ್ಯೆಗಳಿವೆ. ತೆರಿಗೆದಾರರ ಹಣವನ್ನು ಉತ್ತಮ ರೀತಿಯಲ್ಲಿ ಬಳಕೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರಿಷಬ್ ಶೆಟ್ಟಿ ಆರೋಗ್ಯ ತುರ್ತು ಪರಿಸ್ಥಿತಿ ಕುರಿತು ಬೆಳಕು ಚೆಲ್ಲಿದ್ದಾರೆ.
ರಿಷಬ್ ಶೆಟ್ಟಿ ಕೈಯಲ್ಲಿ ಸದ್ಯ 8 ಸಿನಿಮಾಗಳಿದ್ದು, ಫುಲ್ ಬ್ಯಸಿಯಾಗಿದ್ದಾರೆ. ಗರುಡ ಗಮನ ವೃಷಭ ವಾಹನ, ಹರಿ ಕಥೆ ಅಲ್ಲ ಗಿರಿ ಕಥೆ, ಬೆಲ್ ಬಾಟಮ್ 2 ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಸಾಮಾಜಿಕ ಕಾರ್ಯದಲ್ಲಿ ಸಹ ತೊಡಗಿಕೊಂಡಿದ್ದಾರೆ. ಇದೀಗ ಉಡುಪಿಯ ಹಳೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕೈ ಜೋಡಿಸುತ್ತಿದ್ದಾರೆ.