LATEST NEWS
ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ಮಾರಣಾಂತಿಕ ದಾಳಿ
ಬೈರೂತ್ ಸೆಪ್ಟೆಂಬರ್ 28: ಹಮಾಸ್ ಉಗ್ರರ ಹೋರಾಟದಲ್ಲಿ ಇಸ್ರೇಲ್ ವಿರುದ್ದ ಯುದ್ದಕ್ಕೆ ಹೊರಟಿರುವ ಹಿಜ್ಬುಲ್ಲಾ ಉಗ್ರರಿಗೆ ಇದೀಗ ಇಸ್ರೇಲ್ ಎದುರೇಟು ನೀಡಿದ್ದು, ಹಿಜ್ಬುಲ್ಲಾ ಕೇಂದ್ರ ಭಾಗವನ್ನು ಗುರಿಯಾಗಿಸಿ ವ್ಯಾಪಕ ದಾಳಿ ನಡೆಸಿದೆ.
ಹಿಝ್ಬುಲ್ಲಾ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಇಸ್ಮಾಯಿಲ್ ಮತ್ತು ಉಪಮುಖಂಡ ಹುಸೈನ್ ಅಹ್ಮದ್ ಇಸ್ಮಾಲಿ ಹತ್ಯೆಗೀಡಾಗಿದ್ದಾರೆ ಎಂದು ಇಸ್ರೇಲ್ ಸೇನೆಯ ಪ್ರಕಟಣೆ ಹೇಳಿದೆ. ಈ ಮಧ್ಯೆ ಇಸ್ರೇಲ್ ದಾಳಿಗೆ ಅಮೆರಿಕ ನೀಡಿರುವ ನೆರವನ್ನು ಇರಾನ್ ಖಂಡಿಸಿದೆ. 5000 ಪೌಂಡ್ ಬಂಕರ್ ಬಸ್ಟರ್ ಗಳನ್ನು ಇಸ್ರೇಲ್ ಗೆ ಅಮೆರಿಕ ಪೂರೈಸಿದೆ ಎಂದು ಆಪಾದಿಸಿದೆ. ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಲಾನನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಇಸ್ರೇಲ್‌ನ ಮೂರು ಪ್ರಮುಖ ಟಿ.ವಿ ಚಾನೆಲ್‌ಗಳು ವರದಿ ಮಾಡಿವೆ. ಇಸ್ರೇಲ್ ನಡೆಸಿದ ಸರಣಿ ದಾಳಿಯಲ್ಲಿ ಅನೇಕ ಕಟ್ಟಡಗಳು ನೆಲಸಮಗೊಂಡಿವೆ.
ಕಳೆದ ಒಂದು ವರ್ಷದಲ್ಲಿ ಲೆಬನಾನ್ ರಾಜಧಾನಿಯಲ್ಲಿ ಸಂಭವಿಸಿದ ಅತಿ ದೊಡ್ಡ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ ಅಮೆರಿಕ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಈ ಮೊದಲು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಅವರು, ‘ಹಿಜ್ಬುಲ್ಲಾ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಹೇಳಿದ್ದರು.
You must be logged in to post a comment Login