FILM
ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಹೀಗೆ ಇಷ್ಟು ಸಮಯ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ – ರಕ್ಷಿತ್ ಶೆಟ್ಟಿ
ಅಯೋಧ್ಯೆ ಮಾರ್ಚ್ 07: ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಹೀಗೆ ಇಷ್ಟು ಸಮಯ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ. ಆದರೆ ಈ ಅನುಭವ ಭಿನ್ನವಾಗಿತ್ತು ಎಂದು ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಅಯೋಧ್ಯೆಯಲ್ಲಿ ತಮಗಾದ ಅನುಭನ್ನು ತಿಳಿಸಿದ್ದಾರೆ.
ರಕ್ಷಿತ್ ಶೆಟ್ಟಿ ಇತ್ತೀಚೆಗೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಿದ್ದಾರೆ. ರಾಮನ ದರ್ಶನ ಮಾಡುವ ಸಮಯದಲ್ಲಿ ತಮಗಾದ ವಿಶೇಷ ಅನುಭೂತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಾಣ ಪ್ರತಿಷ್ಠೆ ಆದಾಗಿನಿಂದಲೂ ರಾಮನನ್ನು ನೇರವಾಗಿ ನೋಡಲು ಕಾತರನಾಗಿದ್ದೆ. ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮನ ಕಣ್ಣುಗಳು ನನ್ನನ್ನು ಬಹುವಾಗಿ ಸೆಳೆದಿದ್ದವು. ಆ ಕಣ್ಣುಗಳು ನಿಜವಾದ ಕಣ್ಣುಗಳೇ ಎಂದು ನನಗೆ ಪದೇ ಪದೇ ಅನ್ನಿಸಿತ್ತು. ಅದೆಷ್ಟೋ ಬಾರಿ ಚಿತ್ರಗಳನ್ನು ಜೂಮ್ ಮಾಡಿ ಮಾಡಿ ನೋಡಿದ್ದೆ. ‘ಇಂದು ನಾನು ಗಮನಿಸಿದಂತೆ ಕಣ್ಣುಗಳ ಆ ತೇಜತೆಯನ್ನು ಮೂರ್ತಿ ಸ್ವತಃ ತಾನೇ ಆವಾಹಿಸಿಕೊಂಡಿದೆಯೇನೋ ಎನ್ನಿಸಿತು. ಕಣ್ಣುಗಳಿಗೆ ಆ ತೇಜಸ್ಸು ಪ್ರಾಪ್ತವಾಗಲು ಕಣ್ಣಿನ ಬಿಳಿಯ ಭಾಗವನ್ನು ಭಿನ್ನವಾದ ಕುಸುರಿ ಕೆಲಸ ಮಾಡಲಾಗಿದೆ ಎಂದು ನಾನು ಅರಿತುಕೊಂಡೆ’
ಇಂದು ಕೊನೆಗೂ ನಾನು ಹತ್ತಿರದಿಂದ ರಾಮನ ಮೂರ್ತಿಯನ್ನು ಕಂಡೆ. ಬಹಳ ಕಡಿಮೆ ಮಂದಿಗೆ ಅಷ್ಟು ಹತ್ತಿರದಿಂದ ರಾಮನನ್ನು ಕಣ್ಣು ತುಂಬಿಸಿಕೊಳ್ಳುವ ಅದೃಷ್ಟ ಪ್ರಾಪ್ತವಾಗುತ್ತದೆ. ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಹೀಗೆ ಇಷ್ಟು ಸಮಯ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ. ಆದರೆ ಈ ಅನುಭವ ಭಿನ್ನವಾಗಿತ್ತು. ಸಾಮಾನ್ಯವಾಗಿ ಎಲ್ಲ ಮೂರ್ತಿ ಕೆತ್ತನೆಗಳನ್ನು ನಾನು ಶ್ಲಾಘಿಸುತ್ತೇನೆ. ಆದರೆ ಈ ಮೂರ್ತಿಯ ಕುಸುರಿ ಅದ್ಭುತ. ಇದು ಸಾಮಾನ್ಯವಲ್ಲ. ರಾಮನೆಂದರೆ ಹಾಗೆಯೇ ಎನಿಸುತ್ತದೆ ಎಂದು ಬರೆದಿದ್ದಾರೆ.