Connect with us

  DAKSHINA KANNADA

  ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಅಪೂರ್ವ ಸಾಧಕಿಯರಾದ ಮೈಮೂನ-ಮರ್ಝಿನಾ ಆಯ್ಕೆ..!

  ಮಂಗಳೂರು: ಗ್ರಾಮೀಣ ಭಾಗದಲ್ಲಿ ಕ್ಷೀರಕ್ರಾಂತಿಯ ಅಪೂರ್ವ ಸಾಧಕಿಯರಾಗಿರುವ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ‘ತಾಯಿ- ಮಗಳು ಮೈಮೂನ- ಮರ್ಝಿನಾ ಅವರು ಪ್ರತಿಷ್ಠಿತ ಮಂಗಳೂರು ಪ್ರೆಸ್ ಕ್ಲಬ್‌ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಪುಷ್ಪರಾಜ್ ನೇತೃತ್ವದ ಆಯ್ಕೆ ಸಮಿತಿ ಇವರನ್ನು ಆಯ್ಕೆ ಮಾಡಿದೆ.
  ಬಾವಲಿಗುರಿಯ ದಿವಂಗತ ದಿ.ಅಬ್ದುಲ್ ಮಜೀದ್ ರಾಜ್ ಕಮಾಲ್ ಅವರ ಪತ್ನಿ ಮೈಮೂನಾ ಹಾಗೂ ಮಗಳು ಮರ್ಝಿನಾ. ಕೃಷಿ, ಗೋಸಾಕಾಣಿಕೆ ಹೈನುಗಾರಿಕೆ ಲಾಭದಾಯಕವಲ್ಲ ಎಂದು ಎಲ್ಲರೂ ದೂರ ಸರಿಯುತ್ತಿರುವ ಈಗಿನ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ವಿಧಾನದ ಮೂಲಕ ಇವರು ಹೈನುಗಾರಿಕೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿದ್ದಾರೆ.ಮೈಮೂನಾರ ಪತಿ ಅಬ್ದುಲ್ ಮಜೀದ್ 2009ರ ಜನವರಿ 26ರಂದು ಹೃದಯಘಾತದಿಂದ ನಿಧನರಾದರು. ಅವರ ನಿಧನದ ಬಳಿಕ ಗೋವುಗಳನ್ನು ಸಾಕುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಮುಂದಿನ ದಾರಿಯನ್ನು ಕಂಡುಕೊಳ್ಳುವುದು ಮೈಮೂನ ಅವರಿಗೆ ಸವಾಲಾಗಿತ್ತು.ಮುಸ್ಲಿಮ್ ಸಮುದಾಯದಲ್ಲಿ ಮಹಿಳೆಯರಿಗೆ ಗೋವುಗಳನ್ನು ಸಾಕುವುದು ಯೋಚಿಸಿದಷ್ಟು ಸುಲಭವಲ್ಲ. ತಮಗೆ ಯಾರು ಕೂಡಾ ನೆರವಿಗೆ ಇಲ್ಲ ಎಂಬ ಕಾರಣಕ್ಕಾಗಿ ಮೈಮೂನ ತಮ್ಮ ಬಳಿಯಿದ್ದ ಗೋವುಗಳ ಜೊತೆ ಆಡುಗಳನ್ನೂ ಮಾರಿದ್ದರು. ಜೀವನ ನಿರ್ವಹಣೆಗೆ ಮನೆಯಲ್ಲಿ ಬಿರಿಯಾನಿ ತಯಾರಿಸಿ, ಮಾರಾಟ ಮಾಡುವ ಕಾಯಕವನ್ನು ಕೈಗೊಂಡರು. ಅದು ಕಷ್ಟಕರವಾಗಿ ಕಂಡು ಬಂದಾಗ ಸಾಫ್ಟ್‌ವೇರ್ ಇಂಜಿನಿಯರ್ ಮಗಳು ಮರ್ಝಿನಾ ಹೈನುಗಾರಿಕೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ತಾಯಿಯ ಮನವೊಲಿಸಿದರು. ಮರ್ಝೀನಾಳ ಮಾತಿನಂತೆ ಮೈಮೂನಾ ಒಂದು ಗೋವು ಖರೀದಿಸಿದರು. ಅವರ ದನ ‘ಲಕ್ಷ್ಮೀ’ ಮುಂದೆ ಕರು ಹಾಕಿತು. ಬಳಿಕ ದನದ ಹಾಲು ಮಾರಾಟದ ಮೂಲಕ ಬದುಕಿನ ದಾರಿಯನ್ನು ಕಂಡು ಕೊಂಡರು. ಮೈಮೂನಾ ಮುಂದೆ ತನ್ನಲ್ಲಿರುವ ಚಿನ್ನಾಭರಣ ಮಾರಾಟ ಮಾಡಿ ಮತ್ತೆ ಏಳು ಗೋವುಗಳನ್ನು ಖರೀದಿಸಿದರು. ಇದರಲ್ಲಿ ಇವರ ಆದಾಯ ವೃದ್ದಿಯಾದರೂ, ಒಂದೇ ವಾರದಲ್ಲಿ ಲಕ್ಷ ಲಕ್ಷ ಮೌಲ್ಯದ 4 ಹಸುಗಳು ಅಸುನೀಗಿದಾಗ ತಾಯಿ ಮಗಳು ಧೃತಿಗೆಡಲಿಲ್ಲ. ಆತ್ಮವಿಶ್ವಾಸದಿಂದ ನಾನಾ ಸವಾಲುಗಳನ್ನು ಎದುರಿಸುತ್ತಾ ಮುಂದುವರಿದರು. ಇವತ್ತು ಇವರು ಯಶಸ್ಸಿನ ಶಿಖರಕ್ಕೆ ತಲುಪಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ಅವರ ಅತ್ಯಾಧುನಿಕ ಹಟ್ಟಿಯಲ್ಲಿ ಗೋವುಗಳ ಸಂಖ್ಯೆ 70 ದಾಟಿದೆ. 40 ಹಸುಗಳಿಂದ ಪ್ರತಿನಿತ್ಯ ದೊರೆಯುವ 300- 320 ಲೀಟರ್ ಹಾಲನ್ನು ಮಾರಲಾಗುತ್ತಿದೆ. ವ್ಯವಸ್ಥೆಯನ್ನು ನೋಡಿಕೊಳ್ಳಲು ಐವರು ಕೆಲಸಗಾರರಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ತಾಯಿ-ಮಗಳು ಹಟ್ಟಿಗೆ ಹೋಗಿ ಎಂಟು ಗಂಟೆವರೆಗೂ ಶುಚಿತ್ವ, ಹಾಲು ಹಿಂಡುವ ಕೆಲಸ ಮಾಡುತ್ತಾರೆ. ಬರುವ ಎಲ್ಲ ಆದಾಯವನ್ನು ಕೂಡಿಡುವ ಇರಾದೆ ಇವರಿಗಿಲ್ಲ. ಬಡ ಹೆಣ್ಮಕ್ಕಳ ಮದುವೆ, ನಿರ್ಗತಿಕರು, ವಿಶೇಷ ಚೇತನರು, ಧಾರ್ಮಿಕ ಸಂಸ್ಥೆಗಳು, ಗ್ರಾಮ ಪಂಚಾಯತ್, ಅನಾಥಾಲಯಗಳು, ವೃದ್ಧಾಶ್ರಮಗಳು ಹೀಗೆ ಜಾತಿ, ಧರ್ಮ ನೋಡದೆ ಆದಾಯದಲ್ಲಿ ದೊಡ್ಡ ಭಾಗವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ನೀಡುತ್ತಿದ್ದಾರೆ.
  ಮಾರ್ಚ್ 10ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ವೇಳೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply