LATEST NEWS
ರಾಜೇಶ್ ಪೂಜಾರಿ ಕೊಲೆ ಪ್ರಕರಣ: ನೈಜ ಕೊಲೆಗಡುಕರ ಪತ್ತೆಗೆ ಮುನೀರ್ ಕಾಟಿಪಳ್ಳ ಆಗ್ರಹ

ರಾಜೇಶ್ ಪೂಜಾರಿ ಕೊಲೆ ಪ್ರಕರಣ: ನೈಜ ಕೊಲೆಗಡುಕರ ಪತ್ತೆಗೆ ಮುನೀರ್ ಕಾಟಿಪಳ್ಳ ಆಗ್ರಹ
ಮಂಗಳೂರು, ಮಾರ್ಚ್ 25 : ಬಜರಂಗದಳ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಮಲ್ಲೂರಿನ ಅಮಾಯಕ ಯುವಕರನ್ನು ಖುಲಾಸೆಗೊಳಿಸಿದ ದ ಕ ಜಿಲ್ಲಾ ಸತ್ರ ನ್ಯಾಯಾಲಯದ ತೀರ್ಪನ್ನು dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ಈ ತೀರ್ಪಿನಿಂದ ಅಮಾಯಕರಾದ ಮಲ್ಲೂರಿನ ಯುವಕರಿಗೆ ಭಾಗಶ ನ್ಯಾಯ ಸಿಕ್ಕಿದೆ.

ಆದರೆ ಇಷ್ಟು ಸಾಲದು. ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.
ಅನ್ಯಾಯವಾಗಿ ಕೊಲೆ ಆರೋಪ ಹೊತ್ತು ಏಳು ತಿಂಗಳು ಜೈಲುವಾಸ ಅನುಭವಿಸಿದ ಯುವಕರಿಗೆ ಸರಕಾರ ಪರಿಹಾರ ಒದಗಿಸಬೇಕು.
ಹಾಗೂ ಪ್ರಕರಣದ ಮರು ತನಿಖೆಗಾಗಿ ವಿಷೇಶ ತನಿಖಾ ತಂಡ ರಚಿಸಿ ನೈಜ ಕೊಲೆಗಾರರನ್ನು ಪತ್ತೆ ಹಚ್ಚಬೇಕು ಎಂದು ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಅಮಾಯಕ ಮಲ್ಲೂರು ಯುವಕರ ಬಿಡುಗಡೆಗಾಗಿ ನಡೆದ ಹೋರಾಟದ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
2014 ರಲ್ಲಿ ಕೊಲೆ ನಡೆದಾಗ ಭಜರಂಗ ದಳ ಕೊಲೆ ಅರೋಪಿಗಳ ಬಂಧನಕ್ಕೆ 48 ಗಂಟೆಗಳ ಗಡುವು ನೀಡಿತ್ತು.
ಅಂದು ತನಿಖೆಯ ನೇತೃತ್ವ ವಹಿಸಿದ್ದ ಇನ್ಸ್ ಪೆಕ್ಟರ್ ಲಿಂಗಪ್ಪ ಮನೆ ಮನೆ ತಿರುಗಿ ಕತ್ತರಿ ಸಾಣೆ ಹಾಕುವ, ಸ್ಟೀಲ್ ವೂಲ್, ಫಿನಾಯಿಲ್ ಮಾರುವ,
ಕಲ್ಲಿನ ಕೋರೆಯಲ್ಲಿ ಕೂಲಿ ಮಾಡುವ ಮಲ್ಲೂರಿನ ಹುಸೈನ್, ಇಮ್ರಾನ್, ಇರ್ಷಾದ್ ಎಂಬ ಅಮಾಯಕ, ಹದಿಹರೆಯದ ಯುವಕರನ್ನು ಬಂಧಿಸಿ ಕೊಲೆಯ ಆರೋಪ ಹೊರಿಸಿದ್ದರು.
ಇವರಿಗೆ ತೆಂಗಿನ ಮರಕ್ಕೆ ಹತ್ತಿ ಕಾಯಿ ಕೀಳುವ ವೃತ್ತಿಯ ಇಸಾಕ್, ಅಲ್ತಾಫ್ ಎಂಬವರು ಲಕ್ಷಾಂತರ ರೂಪಾಯಿ ಸುಫಾರಿ ನೀಡಿದ್ದರು ಎಂದು ಆರೋಪ ಹೊರಿಸಿದ್ದರು.
ಬಂಧಿತ ಅಮಾಯಕರ ಪರ dyfi ಅಂದು ಮರು ತನಿಖೆಗೆ ಆಗ್ರಹಿಸಿ ತೀವ್ರ ಹೋರಾಟ ನಡೆಸಿತ್ತು.
ಉಸ್ತುವಾರಿ ಮಂತ್ರಿ ರಮಾನಾಥ ರೈ ಮನೆಗೆ ಮೆರವಣಿಗೆ ನಡೆಸಲಾಗಿತ್ತು.
ಸತತ ಆರು ತಿಂಗಳ ಹೋರಾಟದ ನಂತರ ಸರಕಾರ ಪ್ರಕರಣದ ಮರು ತನಿಖೆಯನ್ನು ಸಿಐಡಿ ನಡೆಸುವಂತೆ ಆದೇಶ ಹೊರಡಿಸಿತ್ತು.
ಆದರೆ ಸಿಐಡಿ ಪ್ರಕರಣದ ತನಿಖೆಗೆ ವಿಶೇಷ ಆಸಕ್ತಿ ತೋರದಿದ್ದುದರಿಂದ ನೈಜ ಕೊಲೆಗಾರರ ಪತ್ತೆ ಸಾಧ್ಯವಾಗಿರಲಿಲ್ಲ.
ಈ ಮಧ್ಯೆ ಪ್ರಕರಣದ ತನಿಖೆಗಾಗಿ ಪರಿಣಿತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸುವಂತೆ ಒತ್ತಾಯಿಸಿ ಶಾಸಕ ಮೊಯ್ದಿನ್ ಬಾವಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿತ್ತು.
ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಈ ಕುರಿತು ನಿರ್ಲಕ್ಷ ವಹಿಸಿದುದರಿಂದ ಇದು ಸಾಧ್ಯವಾಗಿಲ್ಲ.
ಅಂತಿಮವಾಗಿ ಕಪೋಲಕಲ್ಪಿತ, ದುರ್ಬಲ ಆರೋಪ ಪಟ್ಟಿ, ರಾಜೇಶ್ ಪೂಜಾರಿ ಮಡದಿ ಅಮಾಯಕ ಮಲ್ಲೂರಿನ ಯುವಕರ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷಿ ನೀಡದೆ, ನೈಜ ಕೊಲೆಗಾರರ ಬಂಧನಕ್ಕೆ ಒತ್ತಾಯಿಸಿದ್ದು.
ಅಂತಿಮವಾಗಿ ನ್ಯಾಯಾಲಯ ಆರೋಪಿಗಳನ್ನು ನಿರಪರಾಧಿಗಳು ಎಂದು ಘೋಷಿಸಿದೆ.
ಈಗಲಾದರು ರಾಜ್ಯ ಸರಕಾರ, ಶಾಸಕ ಮೊಯ್ದಿನ್ ಬಾವಾ ಎಚ್ಚೆತ್ತುಕೊಳ್ಳಬೇಕು.
ಅಮಾಯಕ ಯುವಕರಿಗೆ, ರಾಜೇಶ್ ಪೂಜಾರಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ಪ್ರಕರಣದ ನೈಜ ರೂವಾರಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಆ ಮೂಲಕ ಮತೀಯ ದ್ವೇಷದ ಪ್ರತೀಕಾರದ ಕೊಲೆಗಳಿಗೆ, ಅಮಾಯಕರನ್ನು ಬಂಧಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು.
ಈ ಕುರಿತು ನ್ಯಾಯ ಒದಗಿಸಲು ಶಾಸಕ ಬಾವಾ ಮುಂದಾಗದಿದ್ದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದ್ದಾರೆ.