FILM
ರಾಜಮೌಳಿಯ ವಿರುದ್ಧ ಬೆದರಿಕೆ ಆರೋಪ ಹೊರಿಸಿದ ಬೋನಿ ಕಪೂರ್

ಮುಂಬೈ, ಫೆಬ್ರವರಿ 12: ಭಾರತದ ಬಹುನಿರೀಕ್ಷಿತ ಸಿನಿಮಾ ‘ಆರ್ ಆರ್ ಆರ್’. ತೆಲುಗು ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾಕ್ಕಾಗಿ ಬಾಲಿವುಡ್‌ನ ಮಂದಿ ಸಹ ಕುತೂಹಲದಿಂದ ಕಾಯುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ ಬಳಿಕ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿದ್ದೆಗೆಡಿಸಿದೆ.
ಯಾಕೆಂದರೆ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಆದ ಎರಡೇ ದಿನಕ್ಕೆ ಅಂದರೆ ಅಕ್ಟೋಬರ್ 15 ಕ್ಕೆ ಬೋನಿ ಕಪೂರ್ ನಿರ್ಮಾಣದ ‘ಮೈದಾನ್’ ಸಿನಿಮಾ ಬಿಡುಗಡೆ ಆಗಿತ್ತಿದೆ. ಆರ್ ಆರ್ ಆರ್ ಅಲೆಯಲ್ಲಿ ತಮ್ಮ ನಿರ್ಮಾಣದ ಸಿನಿಮಾ ‘ಮೈದಾನ್’ ಕೊಚ್ಚಿಹೋಗುತ್ತದೆ ಎಂಬ ಭಯ ಬೋನಿ ಕಪೂರ್ ಅನ್ನು ಕಾಡುತ್ತಿದೆ.

ವಿಶೇಷ ಎಂದರೆ ಎರಡು ಸಿನಿಮಾದಲ್ಲೂ ನಟ ಅಜಯ್ ದೇವಗನ್ ಕಾಣಿಸಿಕಂಡಿದ್ದಾರೆ. ಮೈದಾನ್ ನಲ್ಲಿ ನಾಯಕನಾಗಿ ಮಿಂಚಿದರೆ, ಆರ್ ಆರ್ ಆರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕ್ಲ್ಯಾಶ್ ಬಗ್ಗೆ ಬೋನಿ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಮೌಳಿ ವಿರುದ್ಧ ಗುಡುಗಿರುವ ಬೋನಿ ಕಪೂರ್ ಇದು ರಾಜಮೌಳಿಯ ಬೆದರಿಕೆ ಮತ್ತು ಅನೈತಿಕ ಎಂದು ಹೇಳಿದ್ದಾರೆ.
ಇತ್ತೀಚಿಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬೋನಿ ಕಪೂರ್, ‘ಆರ್ ಆರ್ ಆರ್ ಮತ್ತು ಮೈದಾನ್ ನಡುವಿನ ಘರ್ಷಣೆ ಬಹಳ ದುರದೃಷ್ಟಕರ ಮತ್ತು ಅನೈತಿಕವಾಗಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಅಜಯ್ ದೇವಗನ್ ಅವರಿಗೆ ತಿಳಿದಿಲ್ಲ. ಇದು ರಾಜಮೌಳಿಯ ಬಲವಾದ ತಂತ್ರಗಾರಿಕೆ ಮತ್ತು ಬೆದರಿಸುವಿಕೆ ಎಂದು ಆರೋಪಿಸಿದ್ದಾರೆ. ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ಮನರಂಜನಾ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಸಮಯದಲ್ಲಿ ಬಹುನಿರೀಕ್ಷೆಯ ಚಿತ್ರಗಳ ಘರ್ಷಣೆ ದುರದೃಷ್ಟಕರ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಅಜಯ್ ದೇವಗನ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿದರು ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ. ಆರ್ ಆರ್ ಆರ್ ಸಿನಿಮಾವನ್ನು ಮುಂದೂಡುವಂತೆ ಅಜಯ್ ದೇವಗನ್ ಮನವಿ ಮಾಡಿಕೊಂಡರು ರಾಜಮೌಳಿ ಒಪ್ಪಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಬೋನಿ ಕಪೂರ್ ಅವರೇ ತನ್ನ ಸಿನಿಮಾದ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕುತ್ತಾರಾ ಅಥವಾ ಆರ್ ಆರ್ ಆರ್ ವಿರುದ್ಧ ತೊಡೆತಟ್ಟಿ ನಿಲ್ಲುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.