National
ಕೊರೊನಾತಂಕ – ರೈಲ್ವೇಯಿಂದ 5 ಸಾವಿರ ಐಸೋಲೇಶನ್ ವಾರ್ಡ್
ನವದೆಹಲಿ, ಜೂನ್ 15, ದಿನದಿಂದ ದಿನಕ್ಕೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರೈಲ್ವೇ ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳನ್ನಾಗಿಸಿದ್ದು ವಿವಿಧ ರಾಜ್ಯಗಳ ಉಪಯೋಗಕ್ಕೆ ನೀಡಲಾರಂಭಿಸಿದೆ.
ತಿಂಗಳ ಹಿಂದೆಯೇ ಆಸ್ಪತ್ರೆಗಳ ಬರ್ಡನ್ ತಪ್ಪಿಸಲು ರೈಲ್ವೇ ಬೋಗಿಗಳನ್ನು ಐಸೋಲೇಶನ್ ಮಾಡಿಕೊಡುತ್ತೇವೆ ಎಂದು ರೈಲ್ವೇ ಸಚಿವಾಲಯ ಹೇಳಿತ್ತು. ಇದೀಗ, 204 ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳಾಗಿ ರೆಡಿ ಮಾಡಿದ್ದು, ಆರಂಭದಲ್ಲಿ ನಾಲ್ಕು ರಾಜ್ಯಗಳ ಕೊರೊನಾ ಪೀಡಿತರಿಗಾಗಿ ಹಂಚಿಕೆ ಮಾಡಿದೆ. ಸದ್ಯದಲ್ಲೇ 5 ಸಾವಿರ ಕಂಪಾರ್ಟ್ ಮೆಂಟ್ ಗಳನ್ನು ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸಿ ನೀಡುವುದಾಗಿ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿ 54 ರೈಲ್ವೇ ಬೋಗಿಗಳನ್ನು ರೋಗಿಗಳ ಆರೈಕೆಗಾಗಿ ಕಾದಿರಿಸಲಾಗಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ 70 ಬೋಗಿಗಳನ್ನು ರೆಡಿ ಮಾಡಿದ್ದು, ತೆಲಂಗಾಣದಲ್ಲಿ 60 ಬೋಗಿಗಳನ್ನು ಐಸೋಲೇಶನ್ ವಾರ್ಡ್ ಗಳಾಗಿ ಪರಿವರ್ತಿಸಲಾಗಿದೆ.
ರಾಜಧಾನಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಗೃಹ ಸಚಿವ ಅಮಿತ್ ಷಾ ಗಂಭೀರ ಕ್ರಮಕ್ಕೆ ಮುಂದಾಗಿದ್ದು, ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಕೊರತೆ ಆಗುವುದನ್ನು ತಪ್ಪಿಸಲು ದೆಹಲಿ ಒಂದರಲ್ಲೇ 500 ಬೋಗಿಗಳನ್ನು ರೆಡಿ ಮಾಡುವಂತೆ ಅಮಿತ್ ಷಾ ಸೂಚಿಸಿದ್ದಾರೆ.
ಈಗಾಗ್ಲೇ 54 ವಿವಿಧ ರೈಲುಗಳನ್ನು ಈ ಕಾರ್ಯಕ್ಕಾಗಿ ಬಳಕೆ ಮಾಡಲಾಗಿದ್ದು, ಪ್ರತೀ ಬೋಗಿಗಳ ಐಸೋಲೇಶನ್ ವಾರ್ಡ್ ಆಗಿ ಪರಿವರ್ತಿಸಲು 67 ಸಾವಿರ ರೂಪಾಯಿ ವ್ಯಯಿಸಲಾಗಿದೆ. ಸದ್ಯಕ್ಕೆ 5000 ಬೋಗಿಗಳ ಪರಿವರ್ತನೆ ಕಾರ್ಯದಲ್ಲಿ ತೊಡಗಿದ್ದು, ಇದಕ್ಕಾಗಿ ಖರ್ಚಾಗುವ 35 ಕೋಟಿ ರೂಪಾಯಿಯನ್ನು ರೈಲ್ವೇ ಸಚಿವಾಲಯವೇ ಭರಿಸುತ್ತಿದೆ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊರೊನಾ ಸೋಂಕು ಭಾರೀ ವೇಗದಲ್ಲಿ ಹರಡುತ್ತಿರುವುದರಿಂದ ಭವಿಷ್ಯದಲ್ಲಿ ಇನ್ನಷ್ಟು ರೈಲ್ವೇ ಬೋಗಿಗಳು ಬೇಕಾಗಬಹುದು ಎನ್ನಲಾಗುತ್ತಿದೆ.