KARNATAKA
ಚೆನ್ನಾಗಿ ಓದಲು ಬುದ್ದಿವಾದ ಹೇಳಿದ್ದೇ ತಪ್ಪಾಯ್ತು- SSLC ವಿದ್ಯಾರ್ಥಿನಿ ನೇಣಿಗೆ ಶರಣು..!

ಚೆನ್ನಾಗಿ ಓದು ಎಂದು ಹೆತ್ತವರು ಹೇಳಿದ ಬುದ್ದಿವಾದಕ್ಕೆ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು: ಚೆನ್ನಾಗಿ ಓದು ಎಂದು ಹೆತ್ತವರು ಹೇಳಿದ ಬುದ್ದಿವಾದಕ್ಕೆ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಬಿ.ಆರ್.ಗುಂಡಾ ಗ್ರಾಮದ ವಿದ್ಯಾರ್ಥಿನಿ 15 ವರ್ಷದ ಪವಿತ್ರಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ.
ದೇವದುರ್ಗದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಪವಿತ್ರಾ ವಸತಿ ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಓದಲು ಇಷ್ಟವಿಲ್ಲದೆ ಶಾಲೆ ತಪ್ಪಿಸಿ ಪವಿತ್ರಾ ಮನೆಗೆ ಬರುತ್ತಿದ್ದಳಂತೆ.ಮನೆಯಲ್ಲಿ ಪೋಷಕರು ಪವಿತ್ರಾಗೆ ಚೆನ್ನಾಗಿ ಓದು ಎಂದು ಬುದ್ದಿ ಹೇಳಿ ಗುರುವಾರ ವಸತಿ ಶಾಲೆಗೆ ಆಕೆಯನ್ನು ಬಿಟ್ಟು ಊರಿಗೆ ಹೋಗಿದ್ದರು.
ಆದರೆ ಅಂದು ವಸತಿ ಶಾಲೆಗೆ ಬಂದರೂ ತರಗತಿಗೆ ಪವಿತ್ರಾ ಗೈರಾಗಿದ್ದಳು.
ಶಾಲೆಯ ವಿದ್ಯಾರ್ಥಿಗಳು ತರಗತಿಗೆ ಹೋದಾಗ ವಸತಿ ಕೋಣೆಯಲ್ಲಿ ಫ್ಯಾನ್‌ಗೆ ವೇಲ್ ಬಿಗಿದುಕೊಂಡು ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.