DAKSHINA KANNADA
ದೊಂದಿಯ ಬೆಳಕಿನಲ್ಲಿ ಮಲ್ಲಿಗೆ ಪ್ರಿಯೆ ಬಲ್ನಾಡು ಉಳ್ಳಾಲ್ತಿಯ ಕಿರುವಾಳು ಮೆರವಣಿಗೆ…!!
ಪುತ್ತೂರು ಎಪ್ರಿಲ್ 18: ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಪ್ರಯುಕ್ತ ಎಪ್ರಿಲ್ 16 ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮೆರವಣಿಗೆ ದೊಂದಿಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ದೊಂದಿಯ ಬೆಳಕಿನಲ್ಲೇ ಬಲ್ನಾಡಿನಿಂದ ಸುಮಾರು 3 ಕಿಲೋಮೀಟರ್ ದೂರದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ದಂಡನಾಯಕ ಉಳ್ಳಾಲ್ತಿ ದೈವಗಳು ಪರಿವಾರ ಸಮೇತವಾಗಿ ಬಂದು ಮಹಾಲಿಂಗೇಶ್ವರನ ಜಾತ್ರೆಯಲ್ಲಿ ಪಾಲ್ಗೊಳ್ಳುವ ಈ ಆಚರಣೆ ಅತ್ಯಂತ ವಿಶಿಷ್ಟವಾದುದು. ಕಿರುವಾಳು ಮೆರವಣಿಗೆಯ ದಾರಿ ಬದಿಯುದ್ಧಕ್ಕೂ ಭಕ್ತರು ಸಾಲು ಸಾಲಾಗಿ ನಿಂದು ದೈವಗಳಿಗೆ ಆರತಿ ಬೆಳಗಿ ಜಾತ್ರೆಗೆ ಕಳುಹಿಸುವ ಸಂಪ್ರದಾಯ ಪುತ್ತೂರಿನದ್ದಾಗಿದೆ.
ಉಳ್ಳಾಲ್ತಿ ದೈವದ ಕಟ್ಟೆಯ ಬಳಿ ಮಹಾಲಿಂಗೇಶ್ವರ ದೇವರ ಮಲ್ಲಿಗೆ ಹಾರವನ್ನು ದೈವಗಳಿಗೆ ಸಮರ್ಪಿಸುವ ಮೂಲಕ ಮಹಾಲಿಂಗೇಶ್ವರ ಸ್ವಾಮಿ ದೈವಗಳನ್ನು ಆತ್ಮೀಯವಾಗಿ ಜಾತ್ರೆಗೆ ಬರಮಾಡಿಕೊಳ್ಳುತ್ತಾನೆ ಎನ್ನುವ ಸಂಕೇತವಾಗಿ ಈ ಆಚರಣೆ ನಡೆದುಕೊಂಡು ಬಂದಿದೆ. ಬಲ್ನಾಡು ಉಳ್ಳಾಲ್ತಿ ದೈವ ಪುತ್ತೂರಿನ ಜಾತ್ರೆಗೆ ಬರುವ ಸಂದರ್ಭದಲ್ಲಿ ಇಡೀ ಪುತ್ತೂರು ನಗರವೇ ಮಲ್ಲಿಗೆಯ ಪರಿಮಳ ಸೂಸುತ್ತದೆ. ಲಕ್ಷಾಂತರ ಮೌಲ್ಯದ ಮಲ್ಲಿಗೆ ಇದೇ ಒಂದು ದಿನ ಬಿಕರಿಯಾಗುವುದು ಇಲ್ಲಿನ ವಿಶೇಷತೆಯೂ ಆಗಿದೆ.
ಕಿರುವಾಳು ಆಗಮನಕ್ಕೆ ಸಂಬಂಧಿಸಿ ಉಳ್ಳಾಲ್ತಿ ದೈವಕ್ಕೆ ಅತ್ಯಂತ ಪ್ರೀತಿಪಾತ್ರವಾದ ಮಲ್ಲಿಗೆಯನ್ನು ಸಮರ್ಪಿಸುತ್ತಾರೆ. ದೇವಸ್ಥಾನದ ಅಂಗಳಕ್ಕೆ ತಲುಪಿದ ದೈವಗಳ ಆಗಮನಕ್ಕಾಗಿ ಮಹಾಲಿಂಗೇಶ್ವರ ಸ್ವಾಮಿ ಕಾದು ಕುಳಿತು ದೈವಗಳನ್ನು ಬರಮಾಡಿಕೊಳ್ಳುತ್ತಾನೆ. ಆ ಬಳಿಕ ದೈವಗಳು ಹಾಗು ಅದಕ್ಕೆ ಸಂಬಂಧಪಟ್ಟವರು ಅಂದು ರಾತ್ರಿ ದೇವಸ್ಥಾನದಲ್ಲೇ ತಂಗುತ್ತಾರೆ. ಈ ನಡುವೆ ದೇವರಿಗೆ ಹೂವಿನ ರಥೋತ್ಸವ, ಕೆರೆ ಉತ್ಸವ ನಡೆಯುತ್ತದೆ.