Connect with us

    DAKSHINA KANNADA

    ಪುಷ್ಪಗಿರಿ ವಿಷ್ಯ ತೂಗುಯ್ಯಾಲೆಯಲ್ಲಿ ಕಲ್ಮಕಾರು ಭವಿಷ್ಯ

    ಸುಳ್ಯ,ಸೆಪ್ಟಂಬರ್ 16:ಪಶ್ಟಿಮಘಟ್ಟದ ಪುಷ್ಪಗಿರಿ ಪರ್ವತದ ತಪ್ಪಲಿನ ನಿವಾಸಿಗಳು ನಗರದ ವ್ಯಾಮೋಹ ಇಲ್ಲದೆ ಹಳ್ಳಿಯಲ್ಲಿ ಕ್ರಷಿ ಮಾಡಿ ನೆಮ್ಮದಿಯ ಜೀವನವನ್ನು ಬಾಳುತ್ತಿರುವವರು. ಆದರೆ ಇದೀಗ ಅವರ ನೆಮ್ಮದಿಗೆ ಕೊಡಲಿಯೇಟು ಬೀಳುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೃಷಿ ಭೂಮಿ ಜೊತೆಗೆ ಜನ್ಮಭೂಮಿಯನ್ನೂ ಕಳೆದುಕೊಳ್ಳುವ ಆತಂಕದಲ್ಲಿ ಈ ಗ್ರಾಮದ ಜನರಿದ್ದಾರೆ.
    ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳಗೋಡು ಗ್ರಾಮಗಳು ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಘೋಷಿಸಲ್ಪಟ್ಟಿದೆ.ಸೂಕ್ಷ್ಮ ಪ್ರದೇಶವೆಂಬ ಘೋಷಣೆ ಈ ಗ್ರಾಮದ ಜನರು ತಮ್ಮ ಮನೆ ಮಠಗಳ ಬಗ್ಗೆ ಯೋಚಿಸುವಂತೆ ಮಾಡಿದೆ. 

    ಕೇಂದ್ರ ಪರಿಸರ ಇಲಾಖೆ ಪರಿಸರ ಸಂರಕ್ಷಣಾ ಕಾಯಿದೆಯಡಿ ಪಶ್ಚಿಮ ಘಟ್ಟಕ್ಕೆ ತಾಗಿ ಕೊಂಡಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳನ್ನಾಗಿ ಘೋಷಿಸಿದೆ. ಹಾಗಾಗಿ ಪುಷ್ಪಗಿರಿ ತಪ್ಪಲಿನ ಈ ಎರಡು ಗ್ರಾಮಗಳು ಅರಣ್ಯಪಾಲಾಗಲಿದೆ. ಕೇಂದ್ರ ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆಯಲ್ಲಿ ಜಿಲ್ಲೆಯ ಈ ಎರಡು ಗ್ರಾಮಗಳ ಹೆಸರು ಉಲ್ಲೇಖವಾಗಿದ್ದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಈ ಗ್ರಾಮಗಳ ಕುರಿತು ಅಧಿಕಾರಿಗಳು ಕೇಂದ್ರಕ್ಕೆ ವರದಿ ನೀಡಿರುವಾಗ ಯಾವುದೇ ನಿಯಮಾವಳಿಗಳನ್ನು ಪಾಲಿಸಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.  ಮೀಸಲು ಅರಣ್ಯದಿಂದ ಒಂದು ಕಿ.ಮೀ ದೂರದವರೆಗಿನ ಎಲ್ಲಾ ಭೂ ಪ್ರದೇಶವನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಲಿದೆ. ಆದರೆ ಕೇಂದ್ರಕ್ಕೆ ವರದಿ ನೀಡುವ ಸಂದರ್ಭದಲ್ಲಿ ಜನಪ್ರತಿನಿಧಿಗಳಲ್ಲಿ ಹಾಗೂ ಗ್ರಾಮಸಭೆಗಳಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ನಿಯಮವೂ ಇದೆ. ಆದರೆ ಅರಣ್ಯ ಅಧಿಕಾರಿಗಳು ಮಾತ್ರ ಯಾವುದೇ ನಿಯಮ ಪಾಲಿಸದೆ ಕೇಂದ್ರಕ್ಕೆ ವರದಿ ನೀಡಿದ್ದಾರೆ. ಕಲ್ಮಕಾರು ಮತ್ತು ಬಾಳಗೋಡು ಗ್ರಾಮದಲ್ಲಿ ಸುಮಾರು 5 ಸಾವಿರ ಜನರಿದ್ದಾರೆ,ಅದರಲ್ಲಿ ಮೂರೂವರೆ ಸಾವಿರ ಮತದಾರರಿದ್ದಾರೆ. ಪೂರ್ವಜರಿಂದ ತಮ್ಮ ಪಾಲಿಗೆ ಬಂದ ಜಾಗದಲ್ಲಿ ಜೀವನ ಕಂಡುಕೊಂಡಿರುವ ಈ ಗ್ರಾಮಗಳ ಜನ ಈಗ ಸರ್ಕಾರದ ಈ ಆತುರದ ಪ್ರಸ್ತಾವನೆಯಿಂದ ಬೆಚ್ಚಿ ಬಿದ್ದಿದ್ದಾರೆ. ತಮ್ಮ ಮೂಲ ಜನ್ಮಭೂಮಿಯನ್ನು ಬಿಟ್ಟುಕೊಡಲು ಇಲ್ಲಿನ ಜನರಲ್ಲಿ ವಿರೋಧವೂ ಹೆಚ್ಚಾಗತೊಡಗಿದೆ. ಅರಣ್ಯ ಇಲಾಖೆ ಒತ್ತುವರಿ ಮಾಡಲು ಮುಂದಾದರೆ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮಕ್ಕೆ ಪ್ರವೇಶಮಾಡಲು ಬಿಡದಿರುವ ಪ್ರತಿಜ್ಞೆಯನ್ನು ಗ್ರಾಮಸ್ಥರು ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯರಾದ ಉದಯ್ ಕುಪ್ಪಡ್ಕ.ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮಸ್ಥರೊಂದಿಗೆ ಇದೀಗ ಪಕ್ಕದ ಜಿಲ್ಲೆಯಾದ ಕೊಡಗಿನ ಜನಪ್ರತಿನಿಧಿಗಳೂ ಸೇರಿಕೊಂಡಿದ್ದಾರೆ. ಅರಣ್ಯ ಇಲಾಖೆಯು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸುತ್ತಿರುವ ಈ ರೀತಿಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸರಕಾರದ ಗಮನವನ್ನು ಮತ್ತೆ ಸೆಳೆಯುವುದಾಗಿ ವಿರಾಜಪೇಟೆ ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಈ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
    ಒಟ್ಟಿನಲ್ಲಿ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಗ್ರಾಮದ ಜನ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ, ಪರಿಸರ ಇಲಾಖೆ ಸಂಬಂಧಪಟ್ಟ ರಾಜ್ಯಗಳ ಲೋಕಸಭಾ ಸದಸ್ಯರ ಸಭೆಯನ್ನು ದೆಹಲಿಯಲ್ಲಿ ಕರೆದಿದ್ದರೂ, ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ವಿರೋಧ ವ್ಯಕ್ತಪಡಿಸದ ದಾಖಲೆಗಳನ್ನು ಇದೀಗ ಗ್ರಾಮಸ್ಥರು ಮುಂದಿಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ನೆಮ್ಮದಿಯ ಜೀವನವನ್ನು ಮರಳಿ ಕೊಡಬೇಕೆಂಬ ಕೂಗೂ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply