LATEST NEWS
ಪ್ರಯಾಣಿಕರ ಸಾವಿಗೆ ಕಾರಣರಾದ ಖಾಸಗಿ ಬಸ್ ಕಂಡಕ್ಟರ್ ಡ್ರೈವರ್ ಅರೆಸ್ಟ್
ಉಡುಪಿ ಡಿಸೆಂಬರ್ 06 : ಖಾಸಗಿ ಬಸ್ ಚಾಲಕ ಧಾವಂತಕ್ಕೆ ಇದೀಗ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದ್ದು, ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ತೋರಿಸಿದ ನಿರ್ಲಕ್ಷಕ್ಕೆ ಮೂವರು ಬಸ್ ಸಿಬ್ಬಂದಿಗಳನ್ನು ಬಂದಿಸಿ ಜೈಲಿಗೆ ಅಟ್ಟಿದ್ದಾರೆ. ಬಂಧಿತರನ್ನು ಖಾಸಗಿ ಬಸ್ ನ ಕಂಡಕ್ಟರ್‌ಗಳಾದ ಜಯಪ್ರಕಾಶ್ ಶೆಟ್ಟಿ (60), ಮಂಜುನಾಥ್ (31) ಹಾಗೂ ಚಾಲಕ ವಿಶ್ವನಾಥ್ ಶೆಟ್ಟಿ (53) ಬಂಧಿತರು.
ಉಡುಪಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ. ಡಿಸೆಂಬರ್ 4 ರಂದು ನಡೆದಿದ್ದು ಪ್ರಕರಣದಲ್ಲಿ ಕಾರ್ಕಳ–ಹೆಬ್ರಿ ಮಾರ್ಗದ ಮೂರೂರು ಬಳಿ ರೇಷ್ಮಾ ಹೆಸರಿನ ಬಸ್ ಹತ್ತುವ ಮುನ್ನವೇ ಬಸ್‌ನ ನಿರ್ವಾಹಕ ಜಯಪ್ರಕಾಶ್ ಶೆಟ್ಟಿ ಬಸ್ ಹೊರಡಲು ಸೂಚನೆ ನೀಡಿದ್ದ. ಪರಿಣಾಮ ಕೃಷ್ಣ ನಾಯ್ಕ್ ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಮತ್ತೊಂದು ಪ್ರಕರಣದಲ್ಲಿ ನವೆಂಬರ್ 26ರಂದು ಸಂಜೆ 6.45ಕ್ಕೆ ಚಂದ್ರಶೇಖರ್ ನಾಯ್ಕ್ ಎಂಬುವರು ಹೆಬ್ರಿ ತಾಲ್ಲೂಕು ಅಲ್ಬಾಡಿ ಗ್ರಾಮದ ಕೊಂಚಾಡಿ ಹಳೆನೀರು ಬೆಟ್ಟು ಬಳಿಯ ನಿಲ್ದಾಣದಲ್ಲಿ ದುರ್ಗಾಂಬಾ ಬಸ್‌ನಿಂದ ಇಳಿಯುವಾಗ, ನಿರ್ವಾಹಕ ಇಳಿಯುವ ಮೊದಲೇ ಬಸ್ ಹೊರಡಲು ಸೂಚನೆ ನೀಡಿದ್ದ. ಪರಿಣಾಮ ಚಂದ್ರಶೇಖರ ನಾಯ್ಕ್ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ಸಂಬಂಧ ಬಸ್ ನಿರ್ವಾಹಕ ಮಂಜುನಾಥ್ ಹಾಗೂ ಚಾಲಕ ವಿಶ್ವನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಎರಡೂ ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ತಿಳಿಸಿದ್ದಾರೆ.