LATEST NEWS
ಆಝಾನ್ ಗೆ ವಿರುದ್ದವಾಗಿ ಮೇ 9 ರಂದು 1 ಸಾವಿರ ದೇವಾಲಯಗಳಲ್ಲಿ ಓಂಕಾರ ಸುಪ್ರಭಾತ – ಪ್ರಮೋದ್ ಮುತಾಲಿಕ್

ಮಂಗಳೂರು ಎಪ್ರಿಲ್ 02: ಮಸೀದಿಯ ಆಝಾನ್ ಮೈಕ್‌ಗಳನ್ನು ತೆಗೆಯಲು ಅಥವಾ ಶಬ್ದ ಕಡಿಮೆ ಮಾಡುವಂತೆ ಸರಕಾರಕ್ಕೆ ಶ್ರೀರಾಮ ಸೇನೆ ನೀಡಿದ ಗಡುವು ಮುಕ್ತಾಯಗೊಂಡಿದ್ದರೂ, ಏನೂ ಕ್ರಮ ಕೈಗೊಂಡಿಲ್ಲ. ಹಾಗಾಗಿ ಮೇ 9ಕ್ಕೆ ಬೆಳಗ್ಗೆ 5ಕ್ಕೆ ರಾಜ್ಯದ ಒಂದು ಸಾವಿರ ದೇವಾಲಯ, ಮಠಗಳಲ್ಲಿ ಓಂಕಾರ, ಸುಪ್ರಭಾತ ಹಾಕಲು ತೀರ್ಮಾನಿಸಿರುವುದಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಈಗಾಗಲೇ ರಾಜ್ಯ ಸರಕಾರಕ್ಕೆ ಆಝಾನ್ ಗೆ ಸಂಬಂಧಿಸಿದಂತೆ ಗಡುವು ನೀಡಿದರೂ ಸುಮ್ಮನೆ ಕುಳಿತಿದೆ. ಈ ಹಿನ್ನಲೆಯಲ್ಲಿ ಮೇ 9ರಂದು ಆಝಾನ್ ಧ್ವನಿಯಷ್ಟು ಶಬ್ದದಲ್ಲಿ ಓಂಕಾರ, ಸುಪ್ರಭಾತ ಹಾಕುತ್ತೇವೆ. ಇದನ್ನು ನಿಲ್ಲಿಸಲು ಬಂದರೆ ಸಂಘರ್ಷ ಆಗಲಿದೆ. ಆಝಾನ್ ಮೈಕ್ ನಿಲ್ಲಿಸಲು ಆಗದ ರಾಜ್ಯ ಸರಕಾರ ಮತ್ತು ಮುಸ್ಲಿಂ ಸಮುದಾಯಕ್ಕೆ ಚಾಲೆಂಜ್ ಆಗಿ ಇದನ್ನು ಮಾಡಲಿದ್ದೇವೆ. ಆಝಾನ್ ಮೈಕ್ ಶಬ್ದ ನಿಲ್ಲಿಸದೆ ಇದ್ದರೆ ನಾವೂ ನಮ್ಮ ಸುಪ್ರಭಾತ, ಓಂಕಾರ ನಿಲ್ಲಿಸಲ್ಲ ಎಂದು ಮುತಾಲಿಕ್ ಎಚ್ಚರಿಸಿದರು.

ತಮ್ಮ ಹೋರಾಟ ಆಝಾನ್ ಅಥವಾ ಚರ್ಚ್ ಪ್ರಾರ್ಥನೆ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದ ಮುತಾಲಿಕ್, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಮಾತ್ರ. ಈ ಬಗ್ಗೆ ಮುಸ್ಲಿಂ ಸಮಾಜ ಹಠದಿಂದ ವರ್ತನೆ ಮಾಡುತ್ತಿದೆ. ರಾಜ್ಯ ಸರ್ಕಾರವೂ ಸುಪ್ರೀಂ ಆಜ್ಞೆ ಅನುಷ್ಠಾನ ಮಾಡುತ್ತಿಲ್ಲ. ಈ ಇಬ್ಬರ ವಿರುದ್ಧವೂ ಹೋರಾಟ ಎಂದು ಹೇಳಿದರು