ಕನ್ನಡದ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ವಿಧಿವಶ

ಬೆಂಗಳೂರು ನವೆಂಬರ್ 24 ಕನ್ನಡದ ಹಿರಿಯ ನಟ, ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್ ಇಂದು ನಿಧನರಾಗಿದ್ದಾರೆ.ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅಂಬರೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

1952ನೇ ಮೇ 25ರಂದು ಮಂಡ್ಯದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ್ದ ಮಳವಳ್ಳಿ ಹುಚೇಗೌಡ ಅಮರನಾಥ್ (ಅಂಬರೀಶ್) ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇತ್ತೀಚೆಗೆ ಅವರ ಅಭಿನಯದ “ಅಂಬಿ ನಿಂಗ್ ವಯಸ್ಸಾಯ್ತೋ” ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿತ್ತು.

ನಟ ಅಂಬರೀಶ್ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಆಸ್ಪತ್ರೆಗೆ ಈಗಾಗಲೇ ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸೇರಿದಂತೆ ಹಲವು‌ ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ‌.