Connect with us

FILM

ಮತ್ತೆ ಒಂದಾದ ಸ್ಯಾಮ್ ಪೂನಂ ಜೋಡಿ !

ಮುಂಬೈ: ಎರಡ್ಮೂರು ದಿನಗಳ ಹಿಂದಷ್ಟೇ ತಮ್ಮ ಗಂಡ ಸ್ಯಾಮ್​ ಬಾಂಬೆ ವಿರುದ್ಧ ದೈಹಿಕ ಹಲ್ಲೆ ನಡೆಸಿದ್ದಿಕ್ಕೆ ದೂರು ಕೊಡುವುದುರ ಜತೆಗೆ ಡೈವೋರ್ಸ್​ ಕೊಡುವುದಕ್ಕೆ ಯೋಚಿಸಿದ್ದ ಪೂನಂ ಪಾಂಡೆ, ಇದೀಗ ಮತ್ತೆ ಗಂಡನ ಮನೆಗೆ ವಾಪಸ್ಸು ಹೋಗಲು ತೀರ್ಮಾನಿಸಿದ್ದಾರೆ.

ಇದಕ್ಕೂ ಮುನ್ನ ತನ್ನ ಗಂಡನ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಪ್ರಕರಣದಲ್ಲಿ ಸ್ಯಾಮ್​ ಬಂಧನವಾಗಿ, ಬೇಲ್​ ಮೇಲೆ ಹೊರಗೆ ಬಂದಿದ್ದರು. ಆ ನಂತರ ಸ್ಯಾಮ್​, ಪೂನಂ ಎದುರು ಸಿಕ್ಕಾಪಟ್ಟೆ ಅತ್ತರಂತೆ. ಹಾಗಾಗಿ ಅವರ ಮೇಲಿನ ಅನುಕಂಪದಿಂದ ದೂರು ಹಿಂದೆ ಪಡೆಯಲು ಪೂನಂ ಮುಂದಾಗಿದ್ದರು.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಸ್ಯಾಮ್​ ಈ ವಿಷಯವಾಗಿ ತುಂಬಾ ನೊಂದಿದ್ದಾರೆ. ಸತತವಾಗಿ ಅಳುತ್ತಲೇ ಇದ್ದಾರೆ. ನನಗೆ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಪ್ರತೀ ಬಾರಿ ಅವರು ನನಗೆ ಹೊಡೆದ ಮೇಲೆ, ಸಾರಿ ಎಂದು ಅಳುತ್ತಾರೆ. ಈ ಬಾರಿ ಸಹ ಅವರು ಅದೇ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಾಮಿಸ್​ ಮಾಡಿದ್ದಾರೆ’ ಎಂದು ಹೇಳಿದ್ದರು.

ಈಗ ದೂರು ವಾಪಸ್ಸು ಪಡೆಯುವುದಷ್ಟೇ ಅಲ್ಲ, ಸ್ಯಾಮ್​ ಜತೆಗೆ ವಾಸಿಸುವುದಕ್ಕೆ ಪೂನಂ ನಿರ್ಧರಿಸಿದ್ದಾರೆ. ಈ ಕುರಿತು ಇನ್ನೊಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಎಲ್ಲವೂ ಬಗೆಹರಿದಿದೆ. ನಾವಿಬ್ಬರೂ ಜತೆಯಾಗಿ ವಾಸಿಸುವುದಕ್ಕೆ ತೀರ್ಮಾನಿಸಿದ್ದೇವೆ.

ನಾವಿಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತೇವೆ. ಏನೋ ಕೆಟ್ಟ ಘಳಿಗೆ, ಹೀಗಾಗಿ ಹೋಯಿತು. ಎಲ್ಲಾ ಮದುವೆಗಳಲ್ಲೂ ಈ ರೀತಿಯ ಏರಿಳಿತಗಳು ಇದ್ದೇ ಇರುತ್ತದೆ. ನಮ್ಮ ಲೈಫ್​ನಲ್ಲೂ ಹೀಗಾಗಿ ಹೋಯಿತು ಮತ್ತು ಸಿಕ್ಕಾಪಟ್ಟೆ ಸುದ್ದಿಯಾಯಿತು’ ಎಂದು ಅವರು ಹೇಳಿಕೊಂಡಿದ್ದಾರೆ.