KARNATAKA
ಕೋಳಿ ಅಂಕದ ಮೇಲೆ ಪೊಲೀಸ್ ರೇಡ್; ವಶಕ್ಕೆ ಪಡೆದ ಬೈಕ್‌ಗಳು ಬೆಂಕಿಗಾಹುತಿ..!
ತೀರ್ಥಹಳ್ಳಿ , ಫೆಬ್ರವರಿ 02: ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಬಳಿ ಕೋಳಿ ಅಂಕದ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳನ್ನು ಸಾಗಾಟ ಮಾಡುವಾಗ ದಾರಿ ಮಧ್ಯೆಯೇ ಸುಟ್ಟು ಹೋಗಿವೆ. ಭಾನುವಾರ ಸಂಜೆ ಘಟನೆ ನಡೆದಿದ್ದು, ಪೊಲೀಸರಿಗೆ ಹೊಸ ತಲೆನೋವೊಂದು ಶುರುವಾಗಿದೆ. ಕೋಣಂದೂರಿನ ಕಾಡು ಮಾರ್ಗಗಳಲ್ಲಿ ಭಾನುವಾರ ಜೂಜಾಟದ ಖಚಿತ ಮಾಹಿತಿಯೊಂದಿಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದರು. ಈ ಸಮಯದಲ್ಲಿ ಜೂಜಾಡುತ್ತಿದ್ದವರು ಹಾಗೂ ಭಾಗಿಯಾದವರು ದಿಕ್ಕಾಪಾಲಾಗಿ ಓಡಿದ್ದರು. ಕೆಲವರು ಬೈಕ್‌ಗಳನ್ನ ಅಲ್ಲೇ ಬಿಟ್ಟು ಕಾಲ್ಕಿತ್ತಿದ್ದರು.
ಬೈಕ್‌ಗಳನ್ನು ಠಾಣೆಗೆ ತಂದರೇ ಆರೋಪಿಗಳು ತಾವಾಗಿಯೇ ಬರ್ತಾರೆ ಎಂದುಕೊಂಡ ಪೊಲೀಸರು, ಬೈಕ್‌ಗಳನ್ನ ಟಾಟಾ ಏಸ್ ವಾಹನದಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಸಾಗಿಸಲು ಮುಂದಾದರು. ದಾರಿ ಮಧ್ಯೆ ಟಾಟಾ ಏಸ್ ವಾಹನದಿಂದ ಬೈಕ್‌ಗಳು ಜಾರಿ ಕೆಳಗೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿವೆ. ನಾಲ್ಕೈದು ಬೈಕ್ ಒಮ್ಮೆಲೆ ಬಿದ್ದಿದ್ದರಿಂದ ಬೆಂಕಿ ನಂದಿಸಲು ಟಾಟಾ ಏಸ್ ವಾಹನ ಚಾಲಕ ಹಾಗೂ ಸಿಬ್ಬಂದಿಗೆ ಸಾಧ್ಯವಾಗಿಲ್ಲ. ನಾಲ್ಕೂ ಬೈಕ್‌ಗಳು ಸುಟ್ಟು ಭಸ್ಮವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೀರ್ಥಹಳ್ಳಿ ಪೊಲೀಸರು, ಬೈಕ್‌ಗಳು ಕೆಳಗೆ ಬಿದ್ದು ಸುಟ್ಟಿವೆ, ಬೈಕ್ ಮಾಲೀಕರಿಗೆ ವಿಮೆ ಕಟ್ಟಿರುವ ದಾಖಲೆಗಳನ್ನ ತರಲು ಹೇಳಿದ್ದೇವೆ. ಪರಿಹಾರ ಕೊಡಿಸುತ್ತೇವೆ ಎಂದಿದ್ದಾರೆ. ತಾಲೂಕಿನಲ್ಲಿ ವಾಹನಗಳನ್ನ ಲಿಫ್ಟ್ ಮಾಡುವಂತಹ ಪೊಲೀಸ್ ವಾಹನಗಳು ಇರುವುದಿಲ್ಲ. ಖಾಸಗಿ ವಾಹನಗಳನ್ನೇ ಬಳಸಬೇಕು. ದಾಳಿ ಮಾಡಲು ಆಸಕ್ತಿ ತೋರುವ ಪೊಲೀಸರು ದಾಳಿಗೆ ತುತ್ತಾದ ವಸ್ತುಗಳ ಬಗ್ಗೆ ಪರಿವೆಯೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.