Connect with us

    BANTWAL

    ಸಾಮರಸ್ಯದ ಹೆಸರಲ್ಲಿ ಕಲ್ಲಡ್ಕದಲ್ಲಿ ಭಯದ ವಾತಾವರಣ, ರೈ ಅಣತಿಯಂತೆ ಕವಾಯತು ನಡೆಸಿತೇ ಪೋಲೀಸ್ ಬಣ

    ಸಾಮರಸ್ಯದ ಹೆಸರಲ್ಲಿ ಕಲ್ಲಡ್ಕದಲ್ಲಿ ಭಯದ ವಾತಾವರಣ, ರೈ ಅಣತಿಯಂತೆ ಕವಾಯತು ನಡೆಸಿತೇ ಪೋಲೀಸ್ ಬಣ

    ಬಂಟ್ವಾಳ,ಡಿಸೆಂಬರ್ 12: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಸಾಮರಸ್ಯದ ಜೊತೆಗೆ ಸಾಮರಸ್ಯ ಕದಡುವ ಪ್ರಯತ್ನವೂ ನಡೆದಿದೆ. ಪರಂಗಿಪೇಟೆಯಿಂದ ಮಾಣಿಯವರೆಗೆ ಈ ಸಾಮರಸ್ಯ ನಡಿಗೆಯನ್ನು ಆಯೋಜಿಸಲಾಗಿತ್ತು.

    ಕಾಂಗ್ರೇಸ್ , ಸಿಪಿಐಂ ಪಕ್ಷಗಳ ಮುಖಂಡರು ಮುಂಚೂಣಿಯಲ್ಲಿ ನಿಂತು ಈ ಪಾದಯಾತ್ರೆ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ಪರಂಗಿಪೇಟೆಯಿಂದ ಮೆಲ್ಕಾರ್ ವರೆಗೆ ಅತ್ಯಂತ ಶಾಂತಿಯುತವಾಗಿ ಸಾಗಿದ ಪಾದಯಾತ್ರೆ ಕಲ್ಲಡ್ಕದಲ್ಲಿ ಭಾರೀ ಪೋಲೀಸ್ ಬಂದೋಬಸ್ತ್ ಮೂಲಕ ಸಾಗಿದೆ.

    ಆದರೆ ಪಾದಯಾತ್ರೆ ಕಲ್ಲಡ್ಕ ಪ್ರವೇಶಿಸುವ ಮೊದಲು ಪೋಲೀಸ್ ಇಲಾಖೆ ಕೈಗೊಂಡ ಕೆಲವು ನಿರ್ಧಾರಗಳು ಕಲ್ಲಡ್ಕ ಪರಿಸರದ ಜನರನ್ನು ಆತಂಕಕ್ಕೀಡು ಮಾಡಿತ್ತು.

    ನೂರಾರು ಸಂಖ್ಯೆಯ ಪೋಲೀಸರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ತನ್ನ ಕವಾಯತನ್ನು ಪ್ರದರ್ಶಿಸಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ.

    ಪರಂಗಿಪೇಟೆಯಿಂದ ಮಾಣಿ ವರೆಗೆ ಹತ್ತಾರು ಮಸೀದಿಗಳು, ದೇವಸ್ಥಾನಗಳಿದ್ದರೂ, ಕೇವಲ ಕಲ್ಲಡ್ಕದ ಶ್ರೀ ರಾಮ ಮಂದಿರದ ಮುಂಭಾಗದಲ್ಲಿ ಪೋಲೀಸರು ಈ ರೀತಿಯ ಕವಾಯತು ನಡೆಸುವ ಅಗತ್ಯವೇನು ಎನ್ನುವ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.

    ಪೋಲೀಸರು ಕಲ್ಲಡ್ಕ ಪರಿಸರದಲ್ಲಿ ನಡೆಸಿರುವ ಕವಾಯತ್ ಪಾದಯಾತ್ರೆಯ ಬಂದೋಬಸ್ತ್ ಗೋ ಅಥವಾ ಕಲ್ಲಡ್ಕದಲ್ಲಿ ಹೆಸರುವಾಸಿಯಾಗಿರುವ ಯಾರನ್ನೋ ಹೆದರಿಸುವ ಉದ್ಧೇಶಕ್ಕೋ ಎನ್ನುವುದು ಮಾತ್ರ ಯಾರಿಗೂ ಅರ್ಥವಾಗಿಲ್ಲ.

    ಸಚಿವ ರಮಾನಾಥ ರೈಗಳ ಬದ್ಧ ವೈರಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ರ ನೇತೃತ್ವದಲ್ಲಿರುವ ಶ್ರೀ ರಾಮ ಮಂದಿರ ಮುಂದೆ ಪೋಲೀಸರ ಕವಾಯತನ್ನು ನಡೆಸಿ ಸಚಿವರು ತನ್ನ ಬಲ ಪ್ರದರ್ಶಿಸಿದ್ದಾರೆಯೋ ಎನ್ನುವ ಆರೋಪಗಳೂ ಇದೀಗ ಕೇಳಿ ಬರುತ್ತಿದೆ.

    ಎಲ್ಲರಲ್ಲೂ ಸಾಮರಸ್ಯ, ಸಹಭಾಳ್ವೆ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಯಾತ್ರೆ ಮಾತ್ರ ಕಲ್ಲಡ್ಕ ಪರಿಸರದ ಜನರಲ್ಲಿ ಭಯ ಹುಟ್ಟಿಸಿರುವುದನ್ನು ಮಾತ್ರ ತಳ್ಳಿ ಹಾಕುವಂತಿಲ್ಲ.

    ಕಲ್ಲಡ್ಕ ಪರಿಸರದಲ್ಲಿ ಪಾದಯಾತ್ರೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯುವ ಲಕ್ಷಣವೇ ಇಲ್ಲದ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಇಂಥ ಕವಾಯತ್ ನಡೆಸುವ ಅಗತ್ಯವೇನಿತ್ತು.

     ಒಟ್ಟಿನಲ್ಲಿ ಭಯ ಮುಕ್ತ , ಸಾಮರಸ್ಯ, ಸಹಭಾಳ್ವೆಯ ಸಂದೇಶ ಹಿಡಿದು ಹೊರಟ ನಡಿಗೆ ಕಲ್ಲಡ್ಕ ಪರಿಸರದಲ್ಲಿರುವ ಜನ ಹಾಗೂ ಹೆದ್ದಾರಿ ಮೂಲಕ ಸಾಗಿದ ಪ್ರಯಾಣಿಕರಲ್ಲಂತು ಭಯದ ವಾತಾವರಣವನ್ನು ನಿರ್ಮಿಸಿದೆ.

    ಇಡೀ ರಾಜ್ಯದಲ್ಲಿ ಕಲ್ಲಡ್ಕವನ್ನು ಕೆಟ್ಟ ದೃಷ್ಠಿಯಲ್ಲಿ ನೋಡುವಂತಹ ಸ್ಥಿತಿಯನ್ನೂ ಸಾಮರಸ್ಯದ ನಡಿಗೆ ಸೃಷ್ಠಿಸಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

    ಅಷ್ಟರಲ್ಲೂ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಕವಾಯತು ನಡೆಸಬೇಕಾದ ಅನಿವಾರ್ಯತೆಯೇನಿತ್ತು ಎನ್ನುವುದು ತಿಳಿಯದಾಗಿದ್ದು, ಅನಾವಶ್ಯಕ ಹೆದ್ದಾರಿ ಬಂದ್ ಮಾಡಿದ ಪೋಲೀಸ್ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply