BANTWAL
ಬಿ.ಸಿ.ರೋಡ್ ಕೈಕಂಬ ಕಾರಂತ ಕೋಡಿಯ ಜನರನ್ನು ಮಲೇರಿಯಾ ಡೆಂಗಿಯಿಂದ ದಯವಿಟ್ಟು ರಕ್ಷಿಸಿ..!!
ಬಂಟ್ವಾಳ : ಬಿ.ಸಿ.ರೋಡ್ ಕೈಕಂಬ ಕಾರಂತ ಕೋಡಿಯ ಜನರನ್ನು ಮಲೇರಿಯಾ ಡೆಂಗಿಯಿಂದ ದಯವಿಟ್ಟು ರಕ್ಷಿಸಿ ಎಂದು ಅಂಗಲಾಚುತಿದ್ದಾರೆ. ಯಾಕೆ ಹೀಗೆ? ಸ್ವಲ್ಪವಾದರೂ ಸ್ಥಳೀಯಾಡಳಿತಕ್ಕೆ ಜವಾಬ್ದಾರಿ ಬೇಡವೆ? ಅಥವಾ ಜನಗಳ ಕುರಿತು ಔದಾಸೀನ್ಯವೆ? ಸ್ಥಳೀಯ ಆಡಳಿತವಾಗಲಿ ಜನ ಪ್ರತಿನಿಧಿಗಳಾಗಲಿ ದಿವ್ಯ ಮೌನಿಗಳಾದ ಹಿನ್ನೆಲೆಯೇನು? ಕಟ್ಟುವ ತೆರಿಗೆ ಹಣಕ್ಕಾದರೂ.,….ನಾಚಿಕೆಯಾಗಬೇಕು.
ಇಷ್ಟೆಲ್ಲ ಯಾಕಂದ್ರೆ ಬಂಟ್ವಾಳ ಬಿ.ಸಿ.ರೋಡ್ ಕೈಕಂಬ ಸಮೀಪದ ಕಾರಂತ ಕೋಡಿಯಲ್ಲಿ ಶತಮಾನದಾದಿಯಿಂದ ಮಳೆನೀರು ಹೋಗುವ ತೋಡೊಂದರಲ್ಲಿ ಚರಂಡಿ ನೀರಿನ ಕೊಳಚೆಯನ್ನು ಧಾರಾಕಾರವಾಗಿ ಬಿಡಲಾಗುತ್ತಿದೆ. ಈ ಕುರಿತು ಕಳೆದ ಮೂರು ವರ್ಷಗಳಿಂದ ಸಂಬಂಧಿತ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ಕೊಡಲಾಗಿದೆ. ಸ್ಥಳ ತನಿಖೆಯಾಗಿದೆ. ಭರವಸೆಯ ಮಹಾಪೂರವೇ ಹರಿದು ಬಂದಿದೆ. ಆದರೆ ಕೊಳಚೆ ನೀರು ನಿಂತಿಲ್ಲ ಮಾತ್ರವಲ್ಲ ಈ ಆಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮೀಪದ ಜಾಗವೊಂದರಲ್ಲಿ ಶೇಖರಗೊಳ್ಳುವಂತೆ ಮಾಡಿದೆ. ರಾಜಾರೋಷದಿಂದ ಎಲ್ಲಾ ರೀತಿಯ ಕೊಳಕನ್ನು ಹೊತ್ತು ತರುತ್ತಾ ಗಬ್ಬು ವಾಸನೆಯನ್ನು ಪ್ರಸರಿಸುತ್ತಾ ಇಲ್ಲಿನ ಹಲವಾರು ಬಾವಿಗಳ ನೀರನ್ನು ಕಲುಷಿತಗೊಳಿಸುತ್ತಿದೆ. ಸೊಳ್ಳೆಗಳ ಆವಾಸಸ್ಥಾನವಾಗಿ ಪರಿವರ್ತಿತವಾಗಿ ಮಲೇರಿಯಾ,ಡೆಂಗಿ ತಾಂಡಾವವಾಡುತ್ತಿದೆ. ಈ ಕುರಿತು ಲೆಕ್ಕವಿಲ್ಲದಷ್ಟು ಸಲ ಸಂಬಂಧಿತರಿಗೆ ಮನವಿ ಸಲ್ಲಿಸಲಾಗಿದೆಯಾದ್ರೂ ಫಲಿತಾಂಶ ಶೂನ್ಯವಾಗಿದ್ದು, ಈ ನರಕ ಯಾತನೆಯಿಂದ ಮುಕ್ತಿಕೊಡಿ ಎಂದು ನೊಂದ ಸ್ಥಳೀಯರು ಮನವಿ ಮಾಡಿದ್ದಾರೆ.