Connect with us

    BANTWAL

    ಪೆಟ್ರೋಲಿಯಂ ಪೈಪ್ ಲೈನ್ ಗೆ ಕನ್ನ ಹಾಕಿದ್ದ ಪ್ರಮುಖ ಆರೋಪಿ ಆರೆಸ್ಟ್…!!

    ಬಂಟ್ವಾಳ ಅಗಸ್ಟ್ 11: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಗ್ರಾಮದ ಅರಳ ಎಂಬಲ್ಲಿ ಪತ್ತೆಯಾದ ಭಾರೀ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.


    ಬಂಧಿತನನ್ನು ಐವನ್ ಚಾರ್ಲೋ ಪಿಂಟೋ ಎಂದು ಗುರುತಿಸಲಾಗಿದ್ದು, ಈತ ಕಳ್ಳತನಕ್ಕೆ ಬಳಸಿಕೊಂಡಿದ್ದ ಜೀಪ್, ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲು ಬಳಸುತ್ತಿದ್ದ ಕ್ಯಾನ್ ಗಳು ಹಾಗೂ ಇತರ ಉಪಕರಣಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಜುಲೈ 11 ರಿಂದ ಸುಮಾರು 40 ಲಕ್ಷ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಈ ಖದೀಮರು ಎಗರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಇನ್ನು ಹಲವು ಪ್ರಮುಖ ಆರೋಪಿಗಳಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.


    ಆರೋಪಿ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಪೈಪ್ ಲೈನ್ ನಿಂದ ರಾಜಾರೋಷವಾಗಿ ಈ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುವ ಈ ಮಾಫಿಯಾದ ಕೃತ್ಯವನ್ನು ಜುಲೈ 27 ರಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ಭೇಧಿಸಿದ್ದಾರೆ.

    ಪ್ರಕರಣದ ಹಿನ್ನಲೆ

    ಮಂಗಳೂರು-ಬೆಂಗಳೂರು ಸಂಪರ್ಕಿಸುವ ಈ ಪೈಪ್ ಲೈನ್ ಹೆಚ್ಚಾಗಿ ಕಾಡು ದಾರಿಯಲ್ಲೇ ಸಾಗುತ್ತಿದ್ದು, ಕೆಲವು ಕಡೆಗಳಲ್ಲಿ ಕೃಷಿ ತೋಟಗಳ ಮಧ್ಯೆಯೂ ಹಾದು ಹೋಗುತ್ತಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಬಂಟ್ವಾಳ ತಾಲೂಕಿನ ಸೋರ್ನಾಡು ಗ್ರಾಮದ ಅರಳ ನಿವಾಸಿ ಐವನ್ ಚಾರ್ಲೋ ಡಿಸೋಜಾ ತನ್ನ ಜಾಗದಲ್ಲಿ ಹಾದುಹೋಗುವ ಪೈಪ್ ಲೈನ್ ಗೆ ಕನ್ನ ಹಾಕಲು ಯೋಜನೆ ರೂಪಿಸಿಕೊಂಡಿದ್ದ. ಯೋಜನೆಯಂತೆ ಮಂಗಳೂರಿನ ನುರಿತ ವೆಲ್ಡರ್ ಗಳನ್ನು ತನ್ನ ಜಮೀನಿಗೆ ಕರೆಸಿಕೊಂಡು, ನೆಲ ಮಟ್ಟದಿಂದ ಸುಮಾರು 15 ಅಡಿ ತಳಭಾಗದಲ್ಲಿ ಹಾದುಹೋಗುವ ಪೈಪ್ ಲೈನ್ ಗೆ ರಂದ್ರ ಕೊರೆದು, ಆ ರಂದ್ರಕ್ಕೆ ಇನ್ನೊಂದು ಪೈಪ್ ಅನ್ನು ವೆಲ್ಡಿಂಗ್ ಮೂಲಕ ಅಳವಡಿಸಿ ನಿರಂತರವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುತ್ತಿದ್ದ. ಈ ನಡುವೆ ಮಂಗಳೂರಿನಿಂದ ಬೆಂಗಳೂರಿಗೆ ಸಾಗಾಟವಾಗುವ ಪೆಟ್ರೋಲಿಯಂ ಉತ್ಪನ್ನಗಳ ಲೆಕ್ಕಾಚಾರದಲ್ಲಿ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ಹಿಂದೂಸ್ಥಾನ ಪೆಟ್ರೋಲಿಯಂ ಸಂಸ್ಥೆಯ ಅಧಿಕಾರಿಗಳು ವೆತ್ಯಾಸವನ್ನು ಕಂಡು ಹಿಡಿಯಲು ಪೈಪ್ ಲೈನ್ ನ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಐವನ್ ಡಿಸೋಜಾ ಜಾಗದಲ್ಲಿ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಪೋಲೀಸರಿಗೆ ಆರೋಪಿ ಐವನ್ ಡಿಸೋಜಾ ನ ಕಳ್ಳತನದ ಕೃತ್ಯ ಬಯಲಾಗಿದೆ. ಸುಮಾರು 40 ಲಕ್ಷ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಕೇವಲ 15 ದಿನಗಳ ಅಂತರದಲ್ಲಿ ಈ ಆರೋಪಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಐವನ್ ಚಾರ್ಲೋ ಡಿಸೋಜಾ ನನ್ನು ಪೋಲೀಸರು ಬಂಧಿಸಿದ್ದು, ಪೈಪ್ ಗೆ ವೆಲ್ಡಿಂಗ್ ನಡೆಸಿದ ಮಂಗಳೂರಿನ ಪಚ್ಚನಾಡಿ ನಿವಾಸಿ ಅಜಿತ್ ಹಾಗೂ ಕಣ್ಣೂರು ನಿವಾಸಿ ಜೋಯಲ್ ಎಂಬಿಬ್ಬರನ್ನೂ ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರು ಹಾದು ಹೋಗುವ ಈ ಪೈಪ್ ಲೈನ್ ನ ಕೆಲವೇ ಕಡೆಗಳಲ್ಲಿ ವಾಲ್ ಗಳನ್ನು ಅಳವಡಿಸಲಾಗಿದ್ದು, ಕಳ್ಳರಿಗೆ ನಿಖರವಾಗಿ ವಾಲ್ ಇರುವ ಪ್ರದೇಶಗಳ ಪತ್ತೆ ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಈ ನಡುವೆ ಪ್ರಕರಣ ಪ್ರಮುಖ ಆರೋಪಿಗಳನ್ನು ಬಂಧಿಸಲು ಪೋಲೀಸರು ಬಲೆ ಬೀಸಿದ್ದು, ತಕ್ಷಣವೇ ಬಂಧಿಸುವ ಭರವಸೆಯಲ್ಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply