FILM
ಜನರು ಸ್ತನ, ಸೊಂಟ, ಮುಖ ಮತ್ತು ಆಕೃತಿ ನೋಡ್ತಾರೆ, ಪ್ರತಿಭೆ ಅಲ್ಲ: ಜೀನತ್ ಅಮಾನ್
ಮೆಗಾ ಸ್ಟಾರ್ ಜೀನತ್ ಅಮಾನ್ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ನಟಿ. ಅಮಿತಾಬ್ ಬಚ್ಚನ್‌ನಿಂದ ಹಿಡಿದು ಫಿರೋಜ್ ಖಾನ್‌ವರೆಗಿನ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಇತ್ತೀಚಿಗೆ ಅಮನ್ ನೀಡಿರುವ ಹೇಳಿಕೆಯೊಂದು ಸಂಚಲನ ಮೂಡಿಸಿದೆ. ಜೀನತ್ ಅಮಾನ್ ಅವರ ಕಾಲದ ಪ್ರಮುಖ ನಟಿಯರಲ್ಲಿ ಒಬ್ಬರು. ತಮ್ಮ ನಟನೆ ಹಾಗೂ ದಿಟ್ಟತನದಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಯಾದೋ ಕಿ ಬಾರಾತ್, ರೋಟಿ ಪ್ರದೋ ಔರ್ ಮಕನ್, ಸತ್ಯಂ ಶಿವಂ ಸುಂದರಂ, ಡಾನ್ ಮತ್ತು ದೋಸ್ತಾನದಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಇತ್ತೀಚಿಗೆ ಅವರು, ಜನರು ತಮ್ಮ ಪ್ರತಿಭೆಗಿಂತ ತಮ್ಮ ಆಕೃತಿ ಮತ್ತು ಸೌಂದರ್ಯದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು ಎಂದು ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ.
ಜೀನತ್ 1971 ರಲ್ಲಿ ‘ಹಲ್ಚಲ್’ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ ಅದೇ ವರ್ಷದಲ್ಲಿ ಅವರು ‘ಹರೇ ರಾಮ ಹರೇ ಕೃಷ್ಣ’ ಮೂಲಕ ಸ್ಟಾರ್ ನಟಿಯಾಗಿ ಮಿಂಚಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ್ಗೆ ತಮ್ಮ ಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ನಟಿ ‘ಶೋಸ್ಟಾಪರ್’ ವೆಬ್ ಸರಣಿಯೊಂದಿಗೆ ಒಟಿಟಿಗೂ ಸಹ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಅಂದು ಹಾಗಿರಲಿ, ಆದ್ರೆ, ಈಚೆಗೆ ಜನರು ಪ್ರತಿಭೆಗಿಂತ ಹೆಚ್ಚಾಗಿ ನಾಯಕಿಯ ಎದೆ, ಸೊಂಟ, ಮುಖ ಮತ್ತು ಆಕೃತಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬ ಮಾತನ್ನು ಹೇಳುವ ಮೂಲಕ ಜೀನತ್ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ ನಾಯಕಿ ಇಂಡಸ್ಟ್ರಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಯಾವಾಗಲೂ ಚಾಲ್ತಿಯಲ್ಲಿದೆ ಎಂದು ಹೇಳುವ ಮೂಲಕ ಇಂದಿಗೂ ಕಾಸ್ಟಿಂಗ್ ಕೌಚ್ ಜಾರಿಯಲ್ಲಿದೆ ಎಂಬ ನಿಗೂಢ ಸತ್ಯ ಬಿಚ್ಚಿಟ್ಟಿದ್ದಾರೆ.
ಅಲ್ಲದೆ, ಚಲನಚಿತ್ರಗಳಲ್ಲಿ ಕೆಲಸ ಮಾಡಲು, ನಟಿಯರು ನಾಯಕರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅನೇಕರ ಜೊತೆ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಅದರ ನಂತರ ಅವರಿಗೆ ಚಿತ್ರದಲ್ಲಿ ಅವಕಾಶ ಸಿಗುತ್ತದೆ. ವರ್ಷಗಳ ಹಿಂದೆ ಹೀಗೇ ಇತ್ತು ಇಂದಿಗೂ ಹಾಗೆಯೇ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ನಟಿ ಜೀನತ್.
ಚಿತ್ರರಂಗದ ಬಗ್ಗೆ ಮಾತನಾಡಿದ ಜೀನತ್ ಅಮನ್, ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಅರಿತುಕೊಂಡೆ, ಜನರು ನನ್ನ ಮುಖ ಮತ್ತು ಆಕೃತಿಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಹೊರತು ನನ್ನ ಪ್ರತಿಭೆಯಲ್ಲಿ ಅಲ್ಲ ಅಂತ. ಅದಕ್ಕಾಗಿ ಸ್ಲಿಮ್ ವೇಸ್ಟ್ ಮತ್ತು ಸೆಕ್ಸಿ ಫಿಗರ್ ಹೊಂದಿರುವ ಹಾಟ್ ಹುಡುಗಿಯರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ. ಉದ್ಯಮದ ಈ ವಾಸ್ತವತೆಯನ್ನು ಕಲಿತ ನಂತರ ನಾನು ನನ್ನ ನೋಟವನ್ನು ಬಂಡವಾಳ ಮಾಡಿಕೊಂಡೆ. ಅಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡೆ. ನನ್ನ ಕೆಲಸ ಮತ್ತು ನಾನು ಮಾಡಿದ ಯಾವುದರ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ ಎಂದು ತಮ್ಮ ನಟನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.