LATEST NEWS
ಕಟೀಲು ಮೇಳದ ಎಲ್ಲಾ ವಿವಾದಗಳಿಗೆ ಪಟ್ಲ ಸತೀಶ್ ಶೆಟ್ಟಿಯೇ ನೇರ ಕಾರಣ- ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ
ಕಟೀಲು ಮೇಳದ ಎಲ್ಲಾ ವಿವಾದಗಳಿಗೆ ಪಟ್ಲ ಸತೀಶ್ ಶೆಟ್ಟಿಯೇ ನೇರ ಕಾರಣ- ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ
ಮಂಗಳೂರು ನೆವೆಂಬರ್ 24: ಕಟೀಲು ಮೇಳದ ವಿವಾದ ಇನ್ನು ಮುಂದುವರೆಯುವ ಹಾಗೇ ಇದ್ದು, ಪಟ್ಲ ಸತೀಶ್ ಶೆಟ್ಟಿ ಅವರನ್ನು ರಂಗಸ್ಥಳದಲ್ಲಿ ಭಾಗವತಿಕೆ ಮಾಡಲು ಅವಕಾಶ ನೀಡದೆ ಇರುವುದಕ್ಕೆ ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದು, ಕಟೀಲು ಮೇಳದ ಎಲ್ಲಾ ವಿವಾದಗಳಿಗೆ ಪಟ್ಲ ಸತೀಶ್ ಶೆಟ್ಟಿಯೇ ನೇರ ಕಾರಣ ಎಂದು ಆರೋಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪಟ್ಲ ಸತೀಶ್ ಶೆಟ್ಟಿ ಅವರನ್ನು ಎರಡನೇ ಮೇಳದಿಂದ ಐದನೇ ಮೇಳಕ್ಕೆ ವರ್ಗಾವಣೆ ಮಾಡಿದ ಬಳಿಕ ಈ ವಿವಾದಗಳು ಪ್ರಾರಂಭವಾಗಿದ್ದು, ಕಟೀಲು ಮೇಳಗಳ ವಿರುದ್ದ ಅವಹೇಳನ ಮಾಡುವ ಘಟನಾವಳಿಗಳು ಕೂಡ ನಡೆದಿತ್ತು. ಪಟ್ಲ ಸತೀಶ್ ಶೆಟ್ಟಿ ಯಿಂದ ಮೇಳದ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಕಾರಣದಿಂದ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಈ ಬಾರಿ ಅವರನ್ನು ಮೇಳಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ಕಟೀಲು ಮೇಳದ ವಿವಾದ ಹೈಕೋರ್ಟ್ ನಲ್ಲಿದ್ದರೂ ಕೂಡ ಮುಜರಾಯಿ ಇಲಾಖೆ ಆಯುಕ್ತರ ಆದೇಶ ಬಗ್ಗೆ ಪಟ್ಲ ಸತೀಶ್ ಶೆಟ್ಟಿ ಬಹಿರಂಗ ವಾಗಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನಲೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರನ್ನು ಮೇಳಕ್ಕೆ ಸೇರಿಸಿಕೊಂಡರೆ ಮೇಳದ ಕಲಾವಿದರ ತಲೆ ಕೆಡಿಸಿ ಮೇಳಗಳನ್ನು ಹಾಳು ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು ಕೈ ಬಿಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಕಟೀಲು ಮೇಳದ ಮೇ ನಲ್ಲಿ ನಡೆದ ಪತ್ತನಾಜೆಯ ಸೇವೆ ಆಟಕ್ಕೂ ಪಟ್ಲ ಸತೀಶ್ ಶೆಟ್ಟಿ ಹಾಜರಿರಲಿಲ್ಲ, ಅಲ್ಲದೆ ವರ್ಷಂಪ್ರತಿ ನಡೆಯುವ ತಾಳ ಮದ್ದಲೆಗೂ ಪಟ್ಲ ಹಾಜರಿರಲಿಲ್ಲ. ಆದರೆ ಸೇವೆಯಾಟದ ದಿನ ರಾತ್ರಿ 9 ಗಂಟೆಗೆ ಕಲಾವಿದರನ್ನು ಹಂಚಿಕೆ ಮಾಡಿ ಚೌಕಿಯಲ್ಲೇ ಈ ಬಗ್ಗೆ ಕಲಾವಿದರಿಗೆ ಮಾಹಿತಿ ನೀಡಿಲಾಗಿತ್ತು. ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರನ್ನು ಯಾವ ಮೇಳದಲ್ಲೂ ಭಾಗವತರನ್ನಾಗಿ ಹೆಸರಿಸಿರಲಿಲ್ಲ.
ಆದರೆ ಈ ಬಗ್ಗೆ ಸೂಚನೆ ಸಿಕ್ಕ ಬಳಿಕವೂ ರಂಗಸ್ಥಳಕ್ಕೆ ಭಾಗವತಿಕೆ ಮಾಡಲು ತೆರಳಿದ್ದು, ಉದ್ದೇಶಪೂರ್ವಕವಾಗಿದ್ದು, ಈ ಘಟನೆಯನ್ನು ದೊಡ್ಡ ವಿವಾದಕ್ಕೀಡು ಮಾಡುವ ಸಲುವಾಗಿ ಪಟ್ಲ ಸತೀಶ್ ಶೆಟ್ಟಿ ಅವರು ಈ ನಾಟಕವಾಡಿದ್ದಾರೆ ಎಂದು ತಿಳಿಸಿದ್ದಾರೆ.