Connect with us

LATEST NEWS

ಭಾವಿ ಪಲಿಮಾರು ಮಠಾಧೀಶರ ಪರ್ಯಾಯಕ್ಕೆ ಕಟ್ಟಿಗೆ ಮೂಹೂರ್ತ

ಉಡುಪಿ, ಆಗಸ್ಟ್ 27: 2018 ಜನವರಿಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವದಲ್ಲಿ ಎರಡನೇ ಬಾರಿಗೆ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಇಂದು ಮಠದ ಆವರಣದಲ್ಲಿ ನಡೆಯಿತು. ಪಲಿಮಾರು ಮಠದ ದೇವರು, ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಸೇರಿದಂತೆ ಎಲ್ಲಾ ದೇವರುಗಳಿಗೆ ಪರ್ಯಾಯ ಕಾರ್ಕ್ರಮಗಳು ಸಾಂಗವಾಗಿ ನೆರವೇರಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಪಲಿಮಾರು ಮಠದಿಂದ ಶ್ರೀಕೃಷ್ಣಮಠದ ಮಧ್ವ ಸರೋವರದ ಬಳಿಗೆ ಕಟ್ಟಿಗೆ ರಥ ನಿರ್ಮಾಣದ ಕಟ್ಟಿಗೆಯನ್ನು ಭವ್ಯ ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಹೆರ್ಗಾ ವೇದವ್ಯಾಸ ಭಟ್ ಪೌರೋಹಿತ್ಯದಲ್ಲಿ ಕಟ್ಟಿಗೆ ರಥದ ಕಂಬಕ್ಕೆ ಪೂಜೆ ನೆರವೇರಿಸಿ ಮೂಹೂರ್ತ ನಡೆಸಲಾಯಿತು. ಈ ಸಂದರ್ಭದಲ್ಲಿ ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿಗಳು, ಪರ್ಯಾಯ ಪೇಜಾವರ ಮಠದ ದಿವಾನ ರಘುರಾಮ ಆಚಾರ್ಯ,ಧಾರ್ಮಿಕ ಮುಖಂಡರುಗಳ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಹರಿಕೃಷ್ಣ ಪುನರೂರು, ಲಕ್ಷ್ಮೀನಾರಾಯಣ ಭಟ್, ಪ್ರದೀಪ್ ಕುಮಾರ್ ಕಲ್ಕೂರ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪರ್ಯಾಯದ ಪೂರ್ವ ಸಿದ್ಧತೆಗಳಲ್ಲಿ ಕಟ್ಟಿಗೆ ಮಹೂರ್ತ ಮೂರನೆಯದ್ದಾಗಿದೆ. ಈಗಾಗಲೇ ಬಾಳೆ ಹಾಗೂ ಅಕ್ಕಿ ಮೂಹೂರ್ತಗಳು ನಡೆದಿದ್ದು ಮುಂದೆ ಭತ್ತ ಮುಹೂರ್ತ ನಡೆಯಲಿದೆ. ಕಟ್ಟಿಗೆ ಮುಹೂರ್ತ ನಡೆದ ಸ್ಥಳದಲ್ಲಿ ಒಂದು ತಿಂಗಳಲ್ಲಿ ಕಟ್ಟಿಗೆ ರಥ ನಿರ್ಮಾಣವಾಗಲಿದ್ದು ಈ ಕಟ್ಟಿಗೆಯನ್ನು ಪರ್ಯಾಯದ ಅವಧಿಯಲ್ಲಿ ಅಡುಗೆ ಮಾಡಲು ಬಳಸಲಾಗುತ್ತಿದೆ.

Facebook Comments

comments