LATEST NEWS
ಲಾಕ್ಡೌನ್ ನಿಯಮ ಉಲ್ಲಂಘಿಸಿ ಪಡುಬಿದ್ರೆಯಲ್ಲಿ ವಾರದ ಸಂತೆ….!!
ಉಡುಪಿ ಜೂನ್ 1: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹತೋಟಿಗೆ ಬರುತ್ತಿದ್ದಂತೆ ಲಾಕ್ ಡೌನ್ ನಡುವೆಯೂ ಜನ ಸಂತೆ ನಡೆಸುವ ಮೂಲಕ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದ್ದು, ಸಂತೆ ನಡೆಯುತ್ತಿದ್ದರೂ ಪಂಚಾಯತ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಕೊರೊನಾ ಪ್ರಕರಣಗಳ ಏರಿಕೆ ಹಿನ್ನಲೆ ಜೂನ್ 7ರವರೆಗೆ ರಾಜ್ಯ ಸರಕಾರ ಲಾಕ್ಡೌನ್ ಹೇರಿ ಆದೇಶ ಹೊರಡಿಸಿದೆ. ಅಲ್ಲದೆ ಈ ಸಂದರ್ಭದಲ್ಲಿ ವಾರದ ಸಂತೆ ಸೇರಿದಂತೆ ಯಾವುದೇ ಸಂತೆ- ಮಾರುಕಟ್ಟೆ ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯಲ್ಲೂ ಯಾವುದೇ ರೀತಿ ಜನ ಸೇರುವ ಸಭೆ ಸಮಾರಂಭ ಹಾಗೂ ಸಂತೆ ನಡೆಸುವಂತೆ ಇಲ್ಲ ಎಂದು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಈ ಆದೇಶದ ಹೊರತಾಗಿಯೂ ಪ್ರತಿ ಮಂಗಳವಾರ ಪಡುಬಿದ್ರೆಯಲ್ಲಿ ಸಂತೆ ನಡೆಯುತ್ತಿದೆ. ಇಂದು ಕೂಡ ನಡೆದ ವಾರದ ಸಂತೆಯಲ್ಲಿ ಸಾವಿರಾರು ಜನ ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು. ತಮ್ಮ ಕಣ್ಣೆದುರೇ ರೂಲ್ಸ್ ಬ್ರೇಕ್ ಹೋಗುತ್ತಿದ್ದಾಗಲೂ ಪಂಚಾಯತ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲಾಡಳಿತದ ಆದೇಶಕ್ಕೆ ಇಲ್ಲಿ ಬೆಲೆ ನೀಡದ ಜನರ ವರ್ತನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕೊರೊನಾ ಪ್ರಕರಣ ಹೆಚ್ಚಾಗಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಹೊರಟಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಆದೇಶಗಳ ಉಲ್ಲಂಘನೆ ಮಾಡುತ್ತಿರುವುದು ಸಾಂಕ್ರಾಮಿಕ ಪ್ರಸಾರವಾಗುವುದಕ್ಕೆ ಕಾರಣವಾಗುತ್ತಿದೆ.