Connect with us

LATEST NEWS

ಯಕ್ಷಗಾನದ ದಂತಕತೆ ಚಿಟ್ಟಾಣಿ ಯುಗಾಂತ್ಯ

ಯಕ್ಷಗಾನದ ದಂತಕತೆ ಚಿಟ್ಟಾಣಿ ಯುಗಾಂತ್ಯ

ಉಡುಪಿ ಅಕ್ಟೋಬರ್ 4: ಪ್ರಪಂಚದ ಏಕೈಕ ಜೀವಂತ ಜನಪದ ಕಲೆ ಯಕ್ಷಗಾನದಲ್ಲಿ ‘ಚಿಟ್ಟಾಣಿ ಯುಗ’ ಅಂತ್ಯವಾಗಿದೆ. ದಕ್ಷಿಣೋತ್ತರ ಕನ್ನಡ ಮಾತ್ರವಲ್ಲ ದೇಶ-ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಡಾ. ರಾಜ್ ಕುಮಾರ್ ಪ್ರೇರಣೆಯಂತೆ ಚಿಟ್ಟಾಣಿಯವರ ಕಣ್ಣನ್ನು ದಾನ ಮಾಡಲಾಗಿದೆ. ಇಂದು ಉತ್ತರ ಕನ್ನಡ ಜಿಲ್ಲೆಯ ಸ್ವಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಯಕ್ಷಗಾನದಲ್ಲಿ ಚಿಟ್ಟಾಣಿ ಘರಾನಾ ಹುಟ್ಟು ಹಾಕಿದ್ದ ರಾಮಚಂದ್ರಹೆಗಡೆ ಜೀವ ಪ್ರಸಂಗದ ಮಂಗಳಗೀತೆ ಹಾಡಿ ಹೋಗಿದ್ದಾರೆ. ಅಕ್ಟೋಬರ್ 3 ರ ರಾತ್ರಿ 9.30 ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಒಂದು ವಾರಗಳಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಟ್ಟಾಣಿಯವರು ಯಾವುದೇ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ.

ಅವರ ಸಾವನ್ನು ಅರಗಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ದೇಹದಲ್ಲಿ ಚೇತನ ಇರುವವರೆಗೂ ವೇಷ ಮಾಡುವ ಪಣತೊಟ್ಟಿದ್ದ ಚಿಟ್ಟಾಣಿ ಅಜ್ಜಯ್ಯ 84ಇಳಿವಯಸ್ಸಿನಲ್ಲೂ ಬಣ್ಣ ಹಚ್ಚಿ ಕುಣಿದಿದ್ದರು.

ಸೆಪ್ಟಂಬರ್ 22 ರಂದು ನವರಾತ್ರಿಯ ಐದನೇ ದಿನ ಶಂತನು ಪಾತ್ರ ಧರಿಸಿ ಸಂಪೂರ್ಣ ಜೀವಹುಡಿ ಆಗುವಂತೆ ಕುಣಿದು ದಣಿದಿದ್ದರು.ಅದೇ ಕೊನೆ ಮನೆಯಿಂದ ಹೊರಟವರು ಮತ್ತೆ ಯಾವುದೇ ಚಿಕಿತ್ಸೆಗೆ ಸ್ಪಂದಿಸಿಲ್ಲ.

ಡಾ. ರಾಜ್ ಕುಮಾರ್ ಪ್ರೇರಣಿ – ಚಿಟ್ಟಾಣಿ ನೇತ್ರದಾನ

ಇಂದು ಬೆಳಿಗ್ಗೆ 8 ಗಂಟೆಗೆ ಉಡುಪಿಯ ಮಣಿಪಾಲದಲ್ಲಿ ಚಿಟ್ಟಾಣಿ ಅಭಿಮಾನಿಗಳು ಅಂತಿಮ ದರ್ಶನ ಕೈಗೊಳ್ಳುತ್ತಾರೆ. ಅಲ್ಲಿಂದ ಅಭಿಮಾನಿಗಳ ಅಂತಿಮ ದರ್ಶನಕ್ಕೆ ಮಾರ್ಗದುದಕ್ಕೂ ಅವಕಾಶ ನೀಡಲಾಗಿದೆ.  ಸಾಲಿಗ್ರಾಮ, ಕುಂದಾಪುರ, ಬೈಂದೂರು, ಹೊನ್ನಾವರ, ಬಾಸ್ಕೆರಿ, ಕವಲಕ್ಕಿಯಲ್ಲಿ ಚಿಟ್ಟಾಣಿಯವರ ದೇಹದ ಅಂತಿಮ ದರ್ಶನ ಕೈಗೊಳ್ಳಬಹುದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹೆರಂಗಡಿ ಗ್ರಾಮದ ಗುಡ್ಡೆಕೆರಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಕ್ಕಳು ತಿಳಿಸಿದ್ದಾರೆ. ಡಾ. ರಾಜ್ ಕುಮಾರ್ ಮತ್ತು ಚಿಟ್ಟಾಣಿಯವರು ಪರಸ್ಪರ ಅಭಿಮಾನಿಗಳಾಗಿದ್ದರು. ಡಾ.ರಾಜ್ ಪ್ರೇರಣೆಯಂತೆ ಚಿಟ್ಟಾಣಿಯವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಚಿಟ್ಟಾಣಿಯವರ ಅಂತಿಮ ಆಸೆಯನ್ನೂ ತೀರಿಸಲಾಗಿದೆ.

ಯಕ್ಷಗಾನದಲ್ಲಿ ಮೇರುನಟ

ಯಕ್ಷಗಾನದಲ್ಲಿ ಮೇರುನಟನಾಗಿ ಮೆರೆದಾಡಿದ ಚಿಟ್ಟಾಣಿಯನ್ನು ಯಕ್ಷರಂಗ ಯಾವತ್ತೂ ಮರೆಯಲ್ಲ. ಕೌರವ, ಭಸ್ಮಾಸುರ, ಮಾಗಧ, ಕೀಚಕ ಹೀಗೆ ಖಳ ಪಾತ್ರಗಳಿಗೆ ಜೀವತುಂಬಿದ ಯಕ್ಷಗಾನದಲ್ಲಿ ಚಿಟ್ಟಾಣಿ ಶೈಲಿ ಅಥವಾ ಘರಾನಾವನ್ನು ಹುಟ್ಟುಹಾಕಿದವರು. 70 ವರ್ಷಗಳ ಕಲಾಜೀವನದಲ್ಲಿ ಲಕ್ಷಾಂತ ಅಭಿಮಾನಿಗಳನ್ನು ಸಂಪಾಧಿಸಿದವರು. ಯಕ್ಷಗಾನದಲ್ಲಿ ಯಕ್ಷನೇ ಕಳೆದು ಹೋದ ಅನುಭವ ಅವರ ಅಭಿಮಾನಿಗಳಿಗೆ.

ಯಕ್ಷಗಾನಕ್ಕೆ ಮೊದಲ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟ ಚಿಟ್ಟಾಣಿ ಕಲಾಮಾತೆ ಪಾದ ಪದ್ಮಗಳಲ್ಲಿ ಅರ್ಪಿತಗೊಂಡಿದ್ದಾರೆ. ಎಂದಿನ ಕಟ್ಟುಪಾಡು ಮೀರಿ ಶಂತನು ಪಾತ್ರದಲ್ಲಿ ಸುದೀರ್ಘ ಕುಣಿದು, ಬಯಸಿಯೇ ಸಾವನ್ನು ಬರಮಾಡಿಕೊಂಡು ಇಚ್ಛಾಮರಣಿಯಂತೆ ಪ್ರಯಾಣ ಮುಗಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.