LATEST NEWS
ಈ ವಾರದ ಅಂತ್ಯದೊಳಗೆ ಅಂಡಮಾನ್ ಸಮುದ್ರ ಪ್ರವೇಶಿಸಲಿದೆ ಮುಂಗಾರು

ಬೆಂಗಳೂರು ಮೇ 14: ಮುಂಗಾರು ಮಳೆ ಕುರಿತಂತೆ ಒಂದು ಒಳ್ಳೆಯ ಸುದ್ದಿ ಹೊರಬಂದಿದ್ದು. ಈ ವಾರದ ಅಂತ್ಯದ ವೇಳೆಗೆ ನೈಋತ್ಯ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರದ ಪ್ರದೇಶಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ.
ಐಎಂಡಿ ಸೋಮವಾರ ಬಿಡುಗಡೆ ಮಾಡಿದ ತನ್ನ ಹವಾಮಾನ ಬುಲೆಟಿನ್‌ನಲ್ಲಿ ನೈಋತ್ಯ ಮಾನ್ಸೂನ್ ಮೇ 19 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದಿದೆ. ಮುಂಗಾರು ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಸಿಸುತ್ತದೆ. ಇದಾದ ಬಳಿಕ ಸಾಮಾನ್ಯವಾಗಿ ಉತ್ತರದ ಕಡೆಗೆ ಚಲಿಸುತ್ತದೆ. ಜುಲೈ 15ರ ವೇಳೆಗೆ ಇಡೀ ದೇಶವನ್ನೇ ಆವರಿಸುತ್ತದೆ. ಈ ವರ್ಷದಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ.

ಭಾರತವು ತನ್ನ ವಾರ್ಷಿಕ ಮಳೆಯ 70 ಪ್ರತಿಶತವನ್ನು ಜೂನ್ ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಪಡೆಯುತ್ತದೆ ಮತ್ತು ಭಾರತದಂತಹ ಕೃಷಿ ದೇಶಕ್ಕೆ ಮಾನ್ಸೂನ್ ನಿರ್ಣಾಯಕವಾಗಿದೆ.
ಈ ಬಾರಿ ನೈಋತ್ಯ ಮುಂಗಾರು ವಾಡಿಕೆಗೂ ಮುನ್ನವೇ ದೇಶವನ್ನು ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 19ರೊಳಗೆ ಮುಂಗಾರು ದೇಶವನ್ನು ಪ್ರವೇಶಿಸಲಿದೆ ಮೇ ಕೊನೆಯ ವಾರದಲ್ಲಿ ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಮಳೆ ಶುರುವಾಗಲಿದೆ.