Connect with us

LATEST NEWS

ಅಕ್ಟೋಬರ್ 17ರಿಂದ ಮೈಸೂರು ದಸರಾ..

ಮೈಸೂರು: ಕೊರೊನಾ ನಿಯಮಗಳಿಗೆ ಅನುಗುಣವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಾಧಾರಣ ದಸರಾ ಆಚರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ಮೈಸೂರು ದಸರಾ-2020 ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಗರದ ಅರಮನೆ ಮಂಡಳಿಯ ಕಚೇರಿಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದಸರಾ ಸಿದ್ಧತೆ, ರೂಪುರೇಷೆ ಸೇರಿದಂತೆ ವಿವಿಧ ವಿಚಾಗಳ ಕುರಿತು ಚರ್ಚೆ ನಡೆಸಲಾಯಿತು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಕೊರೊನಾ ವಾರಿಯರ್ಸ್ ಗಳ ಆಯ್ಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಒಂದು ದಿನಕ್ಕೆ ಒಂದೇ ಕಾರ್ಯಕ್ರಮ ಇರಲಿದೆ ಎಂದರು.

ಪ್ರತಿ ವರ್ಷ ಮೈಸೂರು ದಸರಾದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆದರೆ ಈ ಬಾರಿ ಎಷ್ಟು ಜನ ಭಾಗವಹಿಸಲು ಅವಕಾಶ ನೀಡಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಜನ ಸೇರಲು ಅವಕಾಶ ನೀಡಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡುತ್ತದೆಯೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ ಮುಖ್ಯ ಕಾರ್ಯದರ್ಶಿಗೆ ಬಂದ ಕೇಂದ್ರದ ಸೂಚನೆಯಂತೆ ಸಿಮೀತ ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯನ್ನು ಐದು ಜನ ನೆರವೇರಿಸಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಅಂತಿಮ ನಿರ್ಧಾರ ಮಾಡುತ್ತಾರೆ. ಡಾ.ರವಿ ಅಥವಾ ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಇದನ್ನು ಸಿಎಂ ಅಂತಿಮ ಮಾಡಲಿದ್ದಾರೆ. ಐದು ಜನ ಕೊರೊನಾ ವಾರಿಯರ್ಸ್ ಗಳಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಜಂಬೂ ಸವಾರಿಯನ್ನು ಸಹ ಅರಮನೆಯಂಗಳದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಐದು ಆನೆಗಳನ್ನು ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ದಸರಾ ಗಜಪಡೆಗೆ ನೂತನ ಕ್ಯಾಪ್ಟನ್‍ನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ 2ರಂದು 12:18 ನಿಮಿಷಕ್ಕೆ ಗಜಪಯಣ ಆರಂಭವಾಗಲಿದೆ. ಈ ಬಾರಿ ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

comments