LATEST NEWS
ಮಹಾಮಳೆಗೆ ನಲುಗಿದ ಮಂಗಳೂರು ಸಹಜ ಸ್ಥಿತಿಯತ್ತ
ಮಹಾಮಳೆಗೆ ನಲುಗಿದ ಮಂಗಳೂರು ಸಹಜ ಸ್ಥಿತಿಯತ್ತ
ಮಂಗಳೂರು ಮೇ 30: ಮಂಗಳೂರಿನಲ್ಲಿ ರಾದ್ದಾಂತ ಸೃಷ್ಠಿಸಿದ ಮಹಾಮಳೆ ಇಂದು ಬಿಡುವು ಪಡೆದಿದೆ. ನಿನ್ನೆ ಒಂದೇ ದಿನ ಅಂದಾಜು 300 ಮಿಲಿಮೀಟರ್ ನಷ್ಟು ಸುರಿದಿದ್ದ ಮಳೆ ಇಂದು ಕಡಿಮೆಯಾಗಿದೆ. ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯವರೆಗೆ ಎಡೆಬಿಡದೆ ಸುರಿದಿದ್ದ ಗಾಳಿ ಸಹಿತ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿತ್ತು. ಹಲವು ಮನೆಗಳು, ರಸ್ತೆಗಳು ಕೃತಕ ನೆರೆಯಿಂದಾಗಿ ಆವೃತವಾಗಿ ಜನಜೀವನ ದುಸ್ತರಗೊಂಡಿತ್ತು.
ಮಂಗಳೂರಿನಲ್ಲಿ ಭಾರಿ ಮಳೆಯ ಹಿನ್ನಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈಗಾಗಲೇ ಮಂಗಳೂರಿಗೆ ಆಗಮಿಸಿದ್ದು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ.
ಮಂಗಳೂರು ನಗರದ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದ ಮಳೆ ನೀರಿನ ಪ್ರಮಾಣ ಇಳಿಕೆ ಯಾಗಿದೆ. ಈ ಮಧ್ಯೆ, ಮಂಗಳೂರು ನಗರದ ಎಲ್ಲ ಪ್ರಮುಖ ಚರಂಡಿಗಳ ಪರಿಶೀಲನೆಯನ್ನು ತಕ್ಷಣ ನಡೆಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಚರಂಡಿಗಳ ಒತ್ತುವರಿ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿ ಅದೇಶ ನೀಡಿದ್ದಾರೆ.
ವರುಣ ಇಂದು ಕರಾವಳಿಯಲ್ಲಿ ಬಿಡುವು ನೀಡಿದ್ದು, ಜನ ನಿರಾಳರಾಗಿದ್ದಾರೆ. ಪ್ರವಾಹದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಒಟ್ಟು ಮಳೆ ಹಾನಿಯ ಬಗ್ಗೆ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ.