LATEST NEWS
ಕರ್ನಾಟಕ ಜಾನಪದ ಪರಿಷತ್ತು ದುಬೈ ಘಟಕದ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಂಘಟಕ ಸದನ್ ದಾಸ್ ಶಿರೂರು ಆಯ್ಕೆ
ದುಬೈ : ಕರ್ನಾಟಕ ಜಾನಪದ ಪರಿಷತ್ತು ನೂತನವಾಗಿ ಆರಂಭಿಸಲಾಗುತ್ತಿರುವ ದುಬೈ ಘಟಕ ಅದರ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಸಂಘಟಕ ಸದನ್ ದಾಸ್ ಶಿರೂರು ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಕಜಾಪ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದನ್ ದಾಸ್ ಅವರು ಕಳೆದ ಒಂದೂವರೆ ದಶಕದಿಂದ ದುಬೈನಲ್ಲಿ ನೆಲೆಸಿದ್ದು, ವಿಮಾ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ತಮ್ಮ ಉದ್ಯೋಗದ ಜೊತೆಗೆ ಹಲವು ಕನ್ನಡಪರ ಸಂಘಟನೆಗಳನ್ನು ಕಟ್ಟಿ ನಿರಂತರವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕನ್ನಡಿಗರ ಕನ್ನಡ ಕೂಟ ದುಬೈ, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಶಿರೂರು ಅಸೋಸಿಯೇಷನ್ ಮೊದಲಾದ ಸಂಘಟನೆಗಳ ಮೂಲಕ ಹತ್ತು ಹಲವು ಕನ್ನಡ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಕರ್ನಾಟಕ ಇತಿಹಾಸ ಅಕಾಡೆಮಿ ಮೂಲಕ ಕರ್ನಾಟಕದ ಐತಿಹಾಸಿಕ ವೈಭವದ ಪರಿಚಯ, ಕರ್ನಾಟಕ ಪ್ರೆಸ್ ಕೌನ್ಸಿಲ್ ದುಬೈ ಘಟಕದ ನೇತೃತ್ವ, ಗಲ್ಫ್ ಕನ್ನಡ ಮೂವಿಸ್ ಮೂಲಕ ಕನ್ನಡ ಸಿನಿಮಾ ಪ್ರಚಾರ – ಹಂಚಿಕೆ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಭಗವದ್ಗೀತಾ ಪಠಣ ಅಭಿಯಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗಲ್ಫ್ ನಾಡಿನಲ್ಲಿಯೂ ಅವಿರತವಾಗಿ ಸಂಘಟನೆ, ಜ್ಞಾನ ಪಸರಣ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ದುಬೈನಲ್ಲಿ ಸಮಾನ ಮನಸ್ಕ ತಂಡಗೊಂದಿಗೆ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸದನ್ ದಾಸ್ ಅವರು ಉದ್ಯೋಗ ಅರಸಿ ಯು.ಎ.ಇ ದೇಶಕ್ಕೆ ಬರುವ ಯುವಕರಿಗೆ, ರಾಜತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಸಹಕಾರ ಅರಸಿ ಬರುವವರಿಗೆ ನೆರವಿನ ಸೇತುವೆಯಾಗಿ ನಿಂತಿದ್ದಾರೆ. ಇದೀಗ ನಾಡಿನ ಗ್ರಾಮೀಣ ಹಾಗೂ ಜನಪದ ಸಂಸ್ಕೃತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನ ದುಬೈ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
You must be logged in to post a comment Login