LATEST NEWS
ಸಿನೆಮಾ ನೋಡಲು ಜೊತೆಯಾಗಿ ಬಂದ ನವದಂಪತಿ ಇಂಟರ್ ವೆಲ್ ನಂತರ ಪತ್ನಿ ನಾಪತ್ತೆ

ಸಿನೆಮಾ ನೋಡಲು ಜೊತೆಯಾಗಿ ಬಂದ ನವದಂಪತಿ ಇಂಟರ್ ವೆಲ್ ನಂತರ ಪತ್ನಿ ನಾಪತ್ತೆ
ಉಡುಪಿ ಜನವರಿ 7: ಸಿನೆಮಾ ನೋಡಲು ಜೊತೆಯಾಗಿ ಬಂದ ಹೊಸ ದಂಪತಿ, ಸಿನೆಮಾ ಇಂಟರ್ ವಲ್ ನಂತರ ಹೆಂಡತಿಯೇ ನಾಪತ್ತೆಯಾಗಿರುವ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಐನಾಕ್ಸ್ ಚಿತ್ರ ಮಂದಿರದಲ್ಲಿ ಈ ಘಟನೆ ನಡೆದಿದೆ. ಕಟಪಾಡಿ ನಿವಾಸಿ ಲಾಯ್ಡ ಮೊಂತೆರೊ ಅವರು ದುಬೈ ನಲ್ಲಿ ಕೆಲಸದಲ್ಲಿದ್ದು, ಪತ್ನಿ ಜೆನ್ ಡಿ.ಕ್ರೂಸ್ ಅವರು ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರ ಮದುವೆ ನಿಶ್ಚಿತಾರ್ಥವಾಗಿದ್ದು, ಇತ್ತೀಚೆಗಷ್ಟೇ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿತ್ತು. ಮಂಗಳೂರಿನ ಹೊಟೇಲ್ ಒಂದರಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕೂಡ ನಡೆದಿತ್ತು.


ಸಾಂದರ್ಭಿಕ ಚಿತ್ರ
ವಾರದ ರಜೆ ಹಿನ್ನಲೆಯಲ್ಲಿ ಸಿನೆಮಾ ವೀಕ್ಷಿಸಲು ತನ್ನ ಪತ್ನಿ ಜೆನ್ ಡಿ.ಕ್ರೂಸ್(28) ಜೊತೆ “ಸಿಂಬಾ ” ಹಿಂದಿ ಸಿನೆಮಾ ನೊಡಲು ಮಣಿಪಾಲದ ಐನಾಕ್ಸ್ ಚಲನಚಿತ್ರ ಮಂದಿರಕ್ಕೆ ಆಗಮಿಸಿದ್ದರು.
ಸಿನಿಮಾ ಇಂಟರ್‌ವೆಲ್ ಸಂದರ್ಭ ಪತ್ನಿ ಜೆನ್ ಡಿ.ಕ್ರೂಸ್ ವಾಷ್‌ರೂಂಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ್ದಾರೆ. ಇತ್ತ ಪತಿ ಎಷ್ಟು ಕಾದರೂ ಪತ್ನಿ ವಾಪಸು ಬಾರದೆ ಇದ್ದಾಗ ಪತಿ ಚಿತ್ರಮಂದಿರವೆಲ್ಲ ಹುಡುಕಾಡಿ, ಸಿಬ್ಬಂದಿಯೊಡನೆ ವಿಚಾರಿಸಿದರು. ಆದರೆ ಸುಳಿವು ಪತ್ತೆಯಾಗಲಿಲ್ಲ. ಜೆನ್ ಅತ್ತ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ.
ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು ಎನ್ನಲಾಗಿದೆ. ಮನೆಯವರು, ಪೊಲೀಸರು ಚಿತ್ರಮಂದಿರದ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.