ಡೀಪ್ ಫೇಕ್ ಅನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ ಕರ್ನಾಟಕ ಸರಕಾರ. ರಾಜ್ಯ ಸರ್ಕಾರದ 2024-25ನೇ ಸಾಲಿನ ಬಜೆಟ್ ಮಂಡನೆ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮ್ಮ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದ್ದಾರೆ. ಡೀಪ್ ಫೇಕ್ ನಂತ ಸೈಬರ್ ಅಪರಾಧಗಳ ವಿರುದ್ದ ಕ್ರಮಕ್ಕೆ 43 ಸಿಇಎನ್ ಪೊಲೀಸ್ ಠಾಣೆ ಉನ್ನತಿಕರಣಕ್ಕೆ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರಿಗೆ ಕಾಡುತ್ತಿದ್ದ ಡೀಪ್ ಫೇಕ್ ಭೂತಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಅನೇಕ ಕಲಾವಿದರು ಮತ್ತು ರಶ್ಮಿಕಾ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿ, ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಡೀಪ್ ಫೇಕ್ ವಿಡಿಯೋ ಬಗ್ಗೆ ಮಾತನಾಡಲೇಬೇಕಾದ ಅನಿವಾರ್ಯತೆ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದರು.
ತಂತ್ರಜ್ಞಾನವನ್ನು ದುರುಪಯೋಗವು ಅತ್ಯಂತ ಭಯಾನಕವಾಗಿದೆ. ನಾನು ಮಹಿಳೆಯಾಗಿ ಮತ್ತು ನಟಿಯಾಗಿ ನನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಅರಿವಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಈ ರೀತಿ ಆಗಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಊಹಿಸಲೂ ಅಸಾಧ್ಯ. ಡೀಪ್ ಫೇಕ್ ಮಾಡುವವರು ಇತರರ ಮೇಲೆ ಪ್ರಭಾವ ಬೀರುವುದಕ್ಕಿಂತ ಮುಂಚೆ ಅಂಥದ್ದನ್ನು ತಡೆಗಟ್ಟಬೇಕಿದೆ ಎಂದು ಹೇಳಿದ್ದರು ರಶ್ಮಿಕಾ.
ಡೀಪ್ ಫೇಕ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದಂತೆಯೇ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಡೀಪ್‌ಫೇಕ್ ಹಾವಳಿಯನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ನಕಲಿ ವಿಷಯವನ್ನು ಪತ್ತೆಹಚ್ಚಿದಾಗ ನಾಗರಿಕರು ದೂರು ದಾಖಲಿಸಲು ಸಹಾಯ ಮಾಡಲು ಸರ್ಕಾರವು ವಿಶೇಷ ಅಧಿಕಾರಿಗಳ ತಂಡವನ್ನು ನಿಯೋಜಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದ್ದರು. ಈಗ ರಾಜ್ಯ ಸರ್ಕಾರ ಕೂಡ ಬಜೆಟ್ ನಲ್ಲಿ ಡೀಪ್ ಫೇಕ್ ವಿರುದ್ಧ ಸಮರ ಸಾರಿದೆ.