LATEST NEWS
ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ? ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್
ಉಡುಪಿ ಮಾರ್ಚ್ 13: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿರುವ ವರದಿ ಕುರಿತು ಪ್ರತಿಕ್ರಿಯೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರಾಕರಿಸಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಯಾವುದೇ ರೀತಿಯ ಸಾಮರ್ಥಯ ತೋರಿಸುವಲ್ಲಿ ವಿಫಲರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಗ್ಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಅಸಮಧಾನಗೊಂಡಿರುವ ಬಗ್ಗೆ ವರದಿಯಾಗಿದೆ.
ಇಂದು ಉಡುಪಿ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ನಮಗೆ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ, ನಾವು ಉಪಚುನಾವಣೆಯ ತಯಾರಿಯಲ್ಲಿ ಇದ್ದು, ನಮ್ಮ ಗುರಿ ಉಪಚುನಾವಣೆ ಗೆಲ್ಲುವುದಷ್ಟೇ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಸಂಘಟನಾ ಸಾಮರ್ಥ್ಯಕ್ಕೆ ತಕ್ಕಂತೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನೆಗೆ ಬಲ ನೀಡಲು ಸಾಧ್ಯವಾಗದೇ ಇರುವುದು ಬಿಜೆಪಿ ಪಕ್ಷದ ವರಿಷ್ಠರ ಚಿಂತೆಗೆ ಕಾರಣವಾಗಿದೆ. ಶಿವಕುಮಾರ್ ಸದ್ದಿಲ್ಲದೇ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ, ನಳಿನ್ ಮತ್ತು ಅವರ ಹೊಸ ತಂಡ ಇನ್ನೂ ಮೈಕೊಡವಿಕೊಂಡು ಎದ್ದು ನಿಂತಿಲ್ಲ. ಪಕ್ಷದಲ್ಲಿ ಹಿಡಿತ ಹೊಂದಿಲ್ಲ. ಸರ್ಕಾರದ ಜತೆ ಸಮನ್ವಯವೂ ಸಾಧಿಸದೇ ಇರುವುದನ್ನು ವರಿಷ್ಠರು ಗಮನಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.