KARNATAKA
ನಿಧಿ ಆಸೆಗಾಗಿ ಬೆತ್ತಲೆ ಪೂಜೆ: ಮೌಢ್ಯ ಆಚರಣೆಯಲ್ಲಿ ತೊಡಗಿದ್ದ ಆರು ಮಂದಿ ಬಂಧನ
ರಾಮನಗರ, ನವೆಂಬರ್ 11: ನಿಧಿ ಆಸೆಗಾಗಿ ಬೆತ್ತಲೆ ಪೂಜೆ ಸೇರಿದಂತೆ ಮೌಢ್ಯದ ಆಚರಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಆರು ಮಂದಿಯನ್ನು ಜಿಲ್ಲೆಯ ಸಾತನೂರು ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಮಿಳುನಾಡು ಮೂಲದವರಾದ ಪಾರ್ಥಸಾರಥಿ, ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿನರಸಪ್ಪ ಬಂಧಿತರು. ಇವರೊಂದಿಗೆ ಇದ್ದ ಕಾರ್ಮಿಕ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಕನಕಪುರ ತಾಲ್ಲೂಕಿನ ಸಾತನೂರು ಸಮೀಪದ ಭೂಹಳ್ಳಿ ಗ್ರಾಮದ ಶ್ರೀನಿವಾಸ ಎಂಬುವರ ಮನೆಯಲ್ಲಿ ಆಗಾಗ ಗುಟ್ಟಾಗಿ ಪೂಜೆ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತು.
ಮನೆ ಮಾಲೀಕರಾದ ಶ್ರೀನಿವಾಸ ಆರ್ಥಿಕ ನಷ್ಟದಿಂದ ಜಮೀನು ಕಳೆದುಕೊಂಡು ಊರು ಬಿಟ್ಟು, ಪತ್ನಿ ಊರಾದ ಬನ್ನೂರಿನಲ್ಲಿ ನೆಲೆಸಿದ್ದರು. 6 ತಿಂಗಳ ಹಿಂದೆ ಅವರಿಗೆ ಮದುವೆ ಒಂದರಲ್ಲಿ ಆರೋಪಿಗಳಾದ ನಾಗರಾಜು ಹಾಗೂ ಪಾರ್ಥಸಾರಥಿ ಅವರ ಪರಿಚಯ ಆಗಿತ್ತು. ಅವರ ಬಳಿ ಶ್ರೀನಿವಾಸ ತಮ್ಮ ಕಷ್ಟ ಹೇಳಿಕೊಂಡಿದ್ದರು.
ನಿಮ್ಮ ಮನೆಯಲ್ಲಿ ನಿಧಿ ಇರುವ ಕಾರಣ ಹೀಗೆಲ್ಲ ನಷ್ಟ ಆಗುತ್ತಿದೆ ಎಂದು ನಂಬಿಸಿದ್ದ ಆರೋಪಿಗಳು ತಮಿಳುನಾಡಿನ ಶಶಿಕುಮಾರ್ ಎಂಬ ಪೂಜಾರಿ ಮೂಲಕ ಶ್ರೀನಿವಾಸ ಅವರ ಮನೆಯಲ್ಲಿ ನಿರಂತರ ಪೂಜೆ ಹಮ್ಮಿಕೊಳ್ಳುತ್ತಾ ಬಂದಿದ್ದರು. ಮಹಿಳೆಯನ್ನು ಬೆತ್ತಲಾಗಿಸಿ ಪೂಜೆ ನಡೆಸಿದರೆ ನಿಧಿ ದೊರೆಯುತ್ತದೆ ಎಂದು ನಂಬಿಸಿದ್ದ, ಆರೋಪಿಗಳು ಮಂಗಳವಾರ ಪೂಜೆಗಾಗಿ ಕೂಲಿ ಕಾರ್ಮಿಕ ಮಹಿಳೆ ಒಬ್ಬರಿಗೆ ₹ 50 ಸಾವಿರ ಆಮಿಷವೊಡ್ಡಿ ಕರೆ ತಂದಿದ್ದರು. ಪೂಜೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದರು.
ಮೌಢ್ಯ ನಿಷೇಧ ಕಾಯ್ದೆ ಉಲ್ಲಂಘನೆ, ಪೂಜೆಗೆ ಕೂಲಿ ಕಾರ್ಮಿಕ ಮಹಿಳೆ ಬಳಕೆ, ನಿಧಿ ನೆಪದಲ್ಲಿ ಮನೆ ಮಾಲೀಕರಿಗೆ ವಂಚನೆ ಯತ್ನ ಸೇರಿದಂತೆ ವಿವಿಧ ಆರೋಪಗಳ ಅಡಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.