Connect with us

KARNATAKA

ಸೈನಿಕರ ಅಂಗವೈಕಲ್ಯ ಪಿಂಚಣಿ ಪಡೆಯುವ ಸಮಸ್ಯೆಗಳ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಸಂಸದ ಕ್ಯಾ. ಚೌಟ

ನವದೆಹಲಿ: ಕರ್ತವ್ಯ ನಿರತರಾಗಿದ್ದ ವೇಳೆ ಅಂಗವಿಕಲತೆಗೆ ಒಳಗಾಗಿರುವ ನಮ್ಮ ಮಾಜಿ ಸೈನಿಕರು ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದಕ್ಕೆ ಪ್ರಸ್ತುತವಿರುವ ವ್ಯವಸ್ಥೆ ಸರಳೀಕೃತಗೊಳಿಸುವ ಮೂಲಕ ಸಿಂಗಲ್ ವಿಂಡೋ ಮಾದರಿ ವ್ಯವಸ್ಥೆ ಜಾರಿಗೊಳಿಸಬೇಕು. ಜೊತೆಗೆ ಈ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಹಾಗೂ ಬದ್ಧತೆ ಪ್ರದರ್ಶಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ.


ಲೋಕಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ನಿವೃತ್ತ ಯೋಧರು ಅಂಗವೈಕಲ್ಯ ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಸದನದ ಗಮನಸೆಳೆದಿರುವ ಕ್ಯಾ. ಚೌಟ ಅವರು, ʼನಾನು ಒಬ್ಬ ಸೈನಿಕನಾಗಿ, ಯೋಧರ ಪರವಾಗಿ ಈ ವಿಚಾರವನ್ನು ಸಂಸತ್ತಿನ ಗಮನಕ್ಕೆ ತರುತ್ತಿದ್ದೇನೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಸೈನಿಕ ಸಮುದಾಯದ ಒಬ್ಬ ಪ್ರತಿನಿಧಿಯಾಗಿ ಇಲ್ಲಿ ನಿಂತಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಯೋಧರ ಕ್ಷೇಮಾಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರಬೇಕಾದರೆ ಅಂಗವಿಕಲರಾಗಿರುವ ನಿವೃತ್ತ ಸೈನಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳುತ್ತದೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ’ ಎಂದು ಹೇಳಿದ್ದಾರೆ.

ಸೈನಿಕರು ಎಂದಿಗೂ ತಮ್ಮ ಕರ್ತವ್ಯದಿಂದ ವಿರಮಿಸುವುದಿಲ್ಲ. ವಿಶೇಷವಾಗಿ ದೇಶದ ರಕ್ಷಣೆಗಾಗಿ ಪರಮೋಚ್ಚ ತ್ಯಾಗ ಮಾಡುವ ಸೈನಿಕರ ಕಷ್ಟ ಕಾಲದಲ್ಲಿ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸದೆ ಅವರ ಜೊತೆಗೆ ನಿಲ್ಲುವುದು ನಮ್ಮ ಕರ್ತವ್ಯ ಕೂಡ ಹೌದು. ಆದರೆ, ಹಲವಾರು ನಿವೃತ್ತ ಸೈನಿಕರು ಎಲ್ಲಾ ದಾಖಲೆಗಳು ಮತ್ತು ಅಗತ್ಯ ಮಾಹಿತಿ ನೀಡಿದ ನಂತರವೂ, ಹೆಚ್ಚುವರಿ ದಾಖಲೆ ನೀಡುವಂತೆ ಅಥವಾ ಕೊಟ್ಟ ಮಾಹಿತಿ ಸರಿಯಿಲ್ಲ ಎನ್ನುವ ನೆಪದಡಿ ಸಂಬಂಧಪಟ್ಟ ಅಧಿಕಾರಿಗಳು ಅವರನ್ನು ಸತಾಯಿಸುವ ಹಲವು ಪ್ರಕರಣಗಳು ನಡೆದಿವೆ. ಮಾಜಿ ಸೈನಿಕರು ಅಂಗವೈಕಲ್ಯ ಪಿಂಚಣಿ ಪಡೆಯಲು ಪದೇಪದೇ ಕೋರ್ಟ್-ಕಚೇರಿ ಅಲೆಯುವ ಪರಿಸ್ಥಿತಿಯೂ ಇದೆ ಎಂದು ಕ್ಯಾ. ಚೌಟ ಬೇಸರ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಸೈನಿಕರು ಅಂಗವಿಕಲ ಪಿಂಚಣಿ ಪಡೆಯುವಲ್ಲಿ ಒಂದೇ ಕಡೆ ಅಗತ್ಯ ದಾಖಲೆ ಸಲ್ಲಿಸಲು ಹಾಗೂ ಕುಂದು-ಕೊರತೆ ಬಗೆಹರಿಸುವುದಕ್ಕೆ ಏಕಗವಾಕ್ಷಿ ವ್ಯವಸ್ಥೆ ಸ್ಥಾಪಿಸಬೇಕು. ಸಚಿವಾಲಯವು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಮಾಜಿ ಸೈನಿಕರು ಅಂಗವಿಕಲ ಪಿಂಚಣಿ ಪಡೆಯುವುದಕ್ಕೆ ಎದುರಿಸುತ್ತಿರುವ ಅಡ-ತಡೆ ನಿವಾರಿಸುವಲ್ಲಿ ಕಾರ್ಯಪ್ರವೃತ್ತವಾಗಬೇಕೆಂದು ದೇಶದ ರಕ್ಷಣೆಗೆ ಸರ್ವಸ್ವವನ್ನೇ ತ್ಯಾಗ ಮಾಡಿರುವ ಎಲ್ಲ ಫಲಾನುಭವಿ ನಿವೃತ್ತ ಯೋಧರ ಪರವಾಗಿ ಕ್ಯಾ. ಚೌಟ ಅವರು ಸದನದಲ್ಲಿ ಧ್ವನಿಯೆತ್ತಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *