LATEST NEWS
ಮುಲ್ಕಿಯಲ್ಲಿ ಪ್ರಧಾನಿ ಚುನಾವಣಾ ಪ್ರಚಾರ – ವಾಹನ ಸವಾರರಿಗೆ ಪರ್ಯಾಯ ಮಾರ್ಗ

ಮಂಗಳೂರು ಮೇ 02: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 3ರಂದು ಮೂಲ್ಕಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದು, ಈ ಸಂಬಂಧ ಅಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಹಳೆಯಂಗಡಿ ಜಂಕ್ಷನ್‌ನಿಂದ ಮುಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕೆಲದಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹಾಗೂ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಮೂಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ತಿರುಗಿ ಕಿನ್ನಿಗೋಳಿ – ಕಟೀಲು – ಬಜಪೆ – ಕಾವೂರು ಮಾರ್ಗವಾಗಿ ಚಲಿಸಬೇಕು.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುವ ವಾಹನಗಳು ನಗರದ ಕೆಪಿಟಿ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದು, ಬೋಂದೆಲ್– ಕಾವೂರು– ಬಜಪೆ– ಕಟೀಲು– ಕಿನ್ನಿಗೋಳಿ– ಮೂಲ್ಕಿ ಕಡೆಗೆ ಹೋಗಬಹುದು. ಕೂಳೂರು ಕಡೆಯಿಂದ ಉಡುಪಿಗೆ ಚಲಿಸುವ ವಾಹನಗಳು ಕೂಳೂರು ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಕಾವೂರು– ಬಜಪೆ– ಕಟೀಲು– ಕಿನ್ನಿಗೋಳಿ– ಮೂಲ್ಕಿ ಮಾರ್ಗವಾಗಿ ಸಂಚರಿಸಬಹುದು.
ಸುರತ್ಕಲ್ ಕಡೆಯಿಂದ ಉಡುಪಿಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಪಕ್ಷಿಕೆರೆ– ಕೋಡಿ ಮಾರ್ಗವಾಗಿ ಮೂಲ್ಕಿಗೆ ಸಂಚರಿಸಬಹುದು’ ಎಂದು ಅವರು ತಿಳಿಸಿದ್ದಾರೆ.