LATEST NEWS
ದೇಶಕ್ಕೆ ಕೇಡು ಮಾಡಿ ವಂದೇ ಮಾತರಂ ಹೇಳುವುದು ಎಷ್ಟು ಸರಿ ಮೋದಿ ಪ್ರಶ್ನೆ
ನವದೆಹಲಿ ಸೆಪ್ಟೆಂಬರ್ 11:ವಂದೇ ಮಾತರಂ ಹೇಳುವುದು ಕೆಲವರಿಗೆ ಇಷ್ಟವಾಗದೇ ಇರಬಹುದು, ದೇಶಕ್ಕೆ ಕೇಡು ಮಾಡಿ ವಂದೇ ಮಾತರಂ ಹೇಳುವುದು ಎಷ್ಟು ಸರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ.
ಅಮೆರಿಕದ ಚಿಕಾಗೋ ವಿಶ್ವಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣದ 125ನೇ ವರ್ಷದ ಸ್ಮರಣಾರ್ಥ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಯಂಗ್ ಇಂಡಿಯಾ, ನ್ಯೂ ಇಂಡಿಯಾ ಕಾರ್ಯಕ್ರಮದಲ್ಲಿ ವಿವಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಚಿಕಾಗೋ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು ಸಹಿಷ್ಣುತೆ, ಶ್ರದ್ಧೆ, ಸಮಾನತೆ ಬಗ್ಗೆ ಮಾತನಾಡಿದ್ದರು. ಇಂದು ಇಡೀ ವಿಶ್ವವೇ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ ಬಗ್ಗೆ ಚರ್ಚೆಯಾಗುತ್ತಿದೆ. ಜನಸೇವೆಯೇ ದೇವರ ಸೇವೆ ಎಂದು ವಿವೇಕಾನಂದರು ಹೇಳಿದ್ದರು.
ಒಂದು ವೇಳೆ ಸ್ವಾಮಿ ವಿವೇಕಾನಂದರು ಇಂದು ಬದುಕಿರುತ್ತಿದ್ದರೆ ಗಂಗಾನದಿಯನ್ನು ಮಾಲಿನ್ಯಗೊಳಿಸುತ್ತಿರುವುದನ್ನು ತಪ್ಪಿಸುತ್ತಿದ್ದರು ಎಂದು ಮೋದಿ ವ್ಯಾಖ್ಯಾನಿಸಿದರು.
ವಿವೇಕಾನಂದರು ನಮ್ಮಲ್ಲಿರುವ ವಿಶ್ವಾಸವನ್ನು ಹೆಚ್ಚಿಸಿದರು. ಚಿಕಾಗೋ ಭಾಷಣದ ನಂತರ ಭಾರತಕ್ಕೆ ವಿಶ್ವದಲ್ಲಿ ಹೊಸ ಗುರುತನ್ನು ಕೊಟ್ಟರು. ಪಾಶ್ಚಿಮಾತ್ಯರಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟರು. ನಾವು ಏನು ತಿನ್ನುತ್ತೇವೆ, ಏನನ್ನು ತಿನ್ನುವುದಿಲ್ಲ ಎಂಬುದು ಪರಂಪರೆಯಲ್ಲ, ಸ್ತ್ರೀಯರನ್ನು ಗೌರವದಿಂದ ಕಾಣಬೇಕೆಂದು ಅಪೇಕ್ಷಿಸಿದರು, ನಮ್ಮ ಹೆಣ್ಣುಮಕ್ಕಳು ಆತ್ಮಗೌರವದಿಂದ ಬದುಕೋದು ಮುಖ್ಯ ಎಂದು ಹೇಳಿದರು.
ವಂದೇ ಮಾತರಂ ಹೇಳುವುದು ಕೆಲವರಿಗೆ ಇಷ್ಟವಾಗದೇ ಇರಬಹುದು, ದೇಶಕ್ಕೆ ಕೇಡು ಮಾಡಿ ವಂದೇ ಮಾತರಂ ಹೇಳುವುದು ಎಷ್ಟು ಸರಿ ಎಂದು ಪ್ರಧಾನಿ ಅವರು ಪ್ರಶ್ನಿಸಿದ್ದಾರೆ. ದೇಶವೀಡಿ ಕಸ ಬಿಸಾಕಿ ವಂದೇ ಮಾತರಂ ಹೇಳಬೇಕೆ ಎಂದು ಪ್ರಶ್ನಿಸಿದ ಮೋದಿ ಯುವ ಜನತೆಗೆ ಶುಚಿತ್ವದ ಪಾಠ ಹೇಳಕೊಟ್ಟರು.
ಗಂಗೆಯಲ್ಲಿ ಮಿಂದೇಳುವುದರಿಂದ ಪಾಪ ಪರಿಹಾರವಾಗುತ್ತಾ, ನನ್ನ ಪ್ರಶ್ನೆಯಿಂದ ಕೆಲವರಿಗೆ ನೋವಾಗಬಹುದು, ಮೊದಲು ಶೌಚಾಲಾಯ ನಿರ್ಮಿಸಿ ನಂತರ ದೇವಾಲಯ ಕಟ್ಟಿ, ದೇಶವೀಡಿ ಕಸ ಬಿಸಾಕಿ ವಂದೇ ಮಾತರಂ ಹೇಳಬೇಕೆ, ದೇಶಕ್ಕೆ ಕೇಡು ಮಾಡಿ ವಂದೇ ಮಾತರಂ ಹೇಳುವುದು ಎಷ್ಟು ಸರಿ ಎಂದು ಮೋದಿಯವರು ಪ್ರಶ್ನಿಸಿದರು.