Connect with us

DAKSHINA KANNADA

ಅನಧಿಕೃತ ಶಿಕ್ಷಣ ಸಂಸ್ಥೆಗಳ ಹಿಂದೆ ಜಿಲ್ಲಾಡಳಿತ : ವಿಮಲಾ ಆರೋಪ

ಮಂಗಳೂರು,ಸೆಪ್ಟೆಂಬರ್ 11 : ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವಿಗೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಕಾರಣ ಎಂದು ಮಹಿಳಾ ಹೋರಾಟಗಾರ್ತಿ ಕೆ.ಎಸ್. ವಿಮಲಾ ಅವರು ಅರೋಪಿಸಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾವ್ಯಾಳ ಅನುಮಾನಾಸ್ಪದ ಸಾವಿನ ಉನ್ನತ ತನಿಖೆಗೆ ಒತ್ತಾಯ, ಶೈಕ್ಷಣಿಕ ಹತ್ಯೆ ಗಳನ್ನು ತಡೆಗಟ್ಟಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಹಮ್ಮಿಕೊಂಡ ಸಾಮೂಹಿಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಾಸಾಗಿ ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ತಲೆ ಎತ್ತಿವೆ. ಇವುಗಳು ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಸ್ಥಳೀಯ ಆಡಳಿತಗಳು ಇವುಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ.

ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಹತ್ತಾರು ವಿದ್ಯಾರ್ಥಿಗಳು ನಿಗೂಢವಾಗಿ ಸಾವನ್ನಪ್ಪುತ್ತಾರೆ. ಸ್ಥಳೀಯ ಆಡಳಿತ, ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದ ಅವರು ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಇದೇ ಮಾದರಿಯದ್ದು ಎಂದ ವಿಮಲಾ, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಇದಕ್ಕೆ ನೇರಾ ಹೊಣೆ ಎಂದು ಆರೋಪಿಸಿದರು. ಕಾವ್ಯಾಳ ಪ್ರಕರಣದಿಂದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಇತರ ಮಕ್ಕಳ ಪೋಷಕರು, ಪಾಲಕರು ಆತಂಕಿತರಾಗಿದ್ದಾರೆ. ಕಾವ್ಯಾ ನಿಗೂಢವಾಗಿ ಸಾವನ್ನಪ್ಪಿದ ವಸತಿಯುತ ಶಾಲೆ ಕೂಡ ಮಾನ್ಯತೆ ಇಲ್ಲದೆ ಹತ್ತು ವರ್ಷದಿಂದ ನಡೀತಿದೆ.

24 ಸಾವಿರ ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.  ಕಾವ್ಯಾ ಹಾಸ್ಟೆಲಿನ 5 ನೇ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಕಟ್ಟಡಕ್ಕೆ ಕನಿಷ್ಟ ಲಿಫ್ಟ್ ಇಲ್ಲದಿದ್ದರೂ ಜಿಲ್ಲಾಡಳಿತ ಪ್ರಶ್ನಿಸುವುದಿಲ್ಲ. ಕಾವ್ಯಾ ಸಾವನ್ನಪ್ಪಿ ಎರಡು ತಿಂಗಳಾದರೂ ಪ್ರಕರಣ ಯಾವ ಹಂತಕ್ಕೆ ಬಂದಿದೆ ಅನ್ನೋದು ಸಾರ್ವಜನಿಕರಿಗೆ ಬಿಡಿ ಕಾವ್ಯಾ ಪೋಷಕರಿಗೂ ಮಾಹಿತಿ ಇಲ್ಲ.

ಪ್ರಕರಣದಲ್ಲಿ ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆಯೆಂದು ಇನ್ನೂ ಕಾವ್ಯಾ ತಾಯಿಗೆ ತಿಳಿಸಿಲ್ಲ. ಹಾಗಾದ್ರೆ ಬಡ ಹೆಣ್ಣು ಮಗಳ ಸಾವಿಗೆ ಜಿಲ್ಲಾಡಳಿತದಿಂದ ಯಾವ ನ್ಯಾಯ ಸಿಗಬಹುದು ಎಂದು ತರಾಟಗೆ ತೆಗೆದುಕೊಂಡರು.

ಕಾವ್ಯಾಳ ಪೋಷಕರು, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ವಿವಿಧ ಕಾಲೇಜು ಸಂಘಟನೆಗಳ ಮುಖಂಡರು, ವಿವಿಧ ದಲಿತ,ಸಮಾಜ ಸೇವಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Advertisement
Click to comment

You must be logged in to post a comment Login

Leave a Reply