DAKSHINA KANNADA
ರಾಜಕೀಯ ಮೈಲೇಜ್ ಗೆ ಅಯ್ಯಪ್ಪ ಸ್ವಾಮಿಯನ್ನೂ ಎಳೆದು ತಂದ ಶಾಸಕ ಮೊಯಿದೀನ್ ಬಾವಾ
ರಾಜಕೀಯ ಮೈಲೇಜ್ ಗೆ ಅಯ್ಯಪ್ಪ ಸ್ವಾಮಿಯನ್ನೂ ಎಳೆದು ತಂದ ಮಂಗಳೂರು ಉತ್ತರ ಶಾಸಕ ಮೊಯಿದೀನ್ ಬಾವಾ
ಮಂಗಳೂರು, ಮಾರ್ಚ್ 9: ತನ್ನ ಎಡವಟ್ಟುಗಳ ಮೂಲಕವೇ ಪ್ರಸಿದ್ಧಿಯಾಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಮತ್ತೊಂದು ಎಡವಟ್ಟಿನ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಹಿಂದೂಗಳ ಅತ್ಯಂತ ಶ್ರದ್ಧಾಭಕ್ತಿಯ ಪುಣ್ಯಕ್ಷೇತ್ರವಾದ ಶಬರಿಮಲೆಯ ಮಣಿಕಂಠ ಸ್ವಾಮಿಯನ್ನು ಭಜಿಸುವ ಪಳ್ಳಿಕಟ್ಟು ಶಬರಿಮಲೆಕ್ಕ್ ಕಲ್ಲು ಮುಲ್ಲುಂ ಸ್ವಾಮಿಕ್ ಹಾಡನ್ನೇ ಹೋಲುವ ಹಾಡನ್ನು ತನ್ನ ರಾಜಕೀಯ ಮೈಲೇಜ್ ಪಡೆಯುದಕ್ಕೋಸ್ಕರ ಬಳಸುವ ಮೂಲಕ ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಯ್ಯಪ್ಪ ಸ್ವಾಮಿಯ ಈ ಹಾಡಿನ ಧಾಟಿಯನ್ನೇ ಬಳಸಿಕೊಂಡು ರಚಿಸಲಾಗಿರುವ ಈ ಹಾಡಿನಲ್ಲಿ ಮೊಯಿದೀನ್ ಬಾವಾ ತನ್ನ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಉಲ್ಲೇಖವಿದೆ.
ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಾಸಕ ಮೊಯಿದೀನ್ ಬಾವಾ ವಿರುದ್ಧ ಭಾರೀ ಟೀಕೆ, ಆಕ್ರೋಶಗಳು ಕೇಳಿ ಬರುತ್ತಿದೆ.
ಹಿಂದೂಗಳ ಅತ್ಯಂತ ಶ್ರದ್ಧಾಭಕ್ತಿಯ ಕೇಂದ್ರವಾಗಿರುವ ಅಯ್ಯಪ್ಪ ಸ್ವಾಮಿಯ ಹಾಡನ್ನು ನಕಲು ಮಾಡಿ ತನ್ನ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿರುವ ಮೊಯಿದೀನ್ ಬಾವಾ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು
ಮತ್ತು ಈ ಹಾಡನ್ನು ಪ್ರಚಾರ ಮಾಡುವುದನ್ನು ಬಿಟ್ಟು ಬಿಡಬೇಕೆಂಬ ಒತ್ತಡವೂ ಕೇಳಿ ಬರುತ್ತಿದೆ.
ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಶಾಸಕನಾಗಬೇಕೆಂದು ಈಗಲೇ ಕಸರತ್ತು ನಡೆಸುತ್ತಿರುವ ಮೊಯಿದೀನ್ ಬಾವಾ ವಾರದ ಹಿಂದೆ ಸುರತ್ಕಲ್ ಪರಿಸರದಲ್ಲಿ ಮನೆ ಮನೆಗೆ ಸೀರೆ ಹಂಚುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು.
ಇದೀಗ ಮತ್ತೊಂದು ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುವ ಮೂಲಕ ಎಡವಟ್ಟು ಶಾಸಕ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ವಿಡಿಯೋಗಾಗಿ…