LATEST NEWS
ಶುರುವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಚುನಾವಣಾ ಪ್ರಚಾರ
ಶುರುವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಚುನಾವಣಾ ಪ್ರಚಾರ
ಮಂಗಳೂರು ಮಾರ್ಚ್ 9: ಬಿಜೆಪಿಯ ಭದ್ರಕೋಟೆಯಾಗಿದ್ದ ಕರಾವಳಿ ಇದೀಗ ಛಿದ್ರವಾಗಿದ್ದು, ಅದನ್ನು ಮತ್ತೆ ತನ್ನ ತೆಕ್ಕೆಗೆ ಸೇರಿಸಲು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರಾವಳಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮುಂಬರುವ ವಿಧಅನ ಸಭಾ ಚುನಾವಣೆಯ ಸಿದ್ದತೆಗೆ ಪ್ರಚಾರ ಆರಂಭಿಸಿರುವ ಶಾ ಅವರು , ಸಮಾಜಿಕ ಜಾಲ ತಾಣಗಳನ್ನು ಸಕ್ರೀಯಗೊಳಿಸಲು ಸೂಚನೆ ನೀಡಿದ್ದಾರೆ.
ಈ ಮೂಲಕ ಯುವ ಜನತೆಯನ್ನು ಮತ್ತು ಬಿಜೆಪಿ ಒಲವುಳ್ಳ ಇತರರನ್ನು ವೇಗವಾಗಿ ಮುಟ್ಟಲು ಸಾಧ್ಯವಾಗುವಂತೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಕರಾವಳಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರು ರಾಜ್ಯ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಸಮಾಜಿಕ ಜಾಲತಾಣಗಳ ಮೂಲಕ ಗರಿಷ್ಟ ಮತದಾರರನ್ನು ತಲುವಂತೆ ಕಾರ್ಯಪ್ರವೃತ್ತರಾಗಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನು ಅವರು ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆ ಯನ್ನು ಪಾಲಿಸಲು ಜಿಲ್ಲಾ ಬಿಜೆಪಿ ಈಗಾಗಲೇ ಕ್ರಮಕೈಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿರುವ ಬೂತ್ ಮಟ್ಟದ ಮುಖಂಡರು ಪ್ರತಿ ಬೂತ್ ನಲ್ಲಿರುವ ಮನೆಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಈ ಪಟ್ಟಿ ಜೊತೆಗೆ ಪ್ರತಿ ಮನೆಯ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಈ ಕಾರ್ಯಗಳನ್ನು ಮಾಡಲು ಪ್ರತಿ ಬೂತ್ ಮಟ್ಟದಲ್ಲಿ ವಾಟ್ಸ್ ಅಪ್ ಗ್ರೂಪ್ ಒಂದನ್ನು ರಚಿಸಿರುವ ಬಿಜೆಪಿ , ಪ್ರತಿ ಗ್ರೂಪ್ ಗೆ ಒಬ್ಬರನ್ನು ಅಡ್ಮಿನ್ ಗಳನ್ನಾಗಿ ಮಾಡಿದೆ.
ಒಂದರಿಂದ 6 ವರೆಗಿನ ಬೂತ್ ಗಳನ್ನು ಒಂದು ಶಕ್ತಿ ಕೇಂದ್ರವಾಗಿ ಪರಿವರ್ತಿಸಲು ಬಿಜೆಪಿ ನಿರ್ಧರಿಸಿದ್ದು, ಈ ಶಕ್ತಿಕೇಂದ್ರಕ್ಕೆ ಒಬ್ಬರು ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಒಂದು ಬೂತ್ ನಲ್ಲಿ ಕನಿಷ್ಠ 100 ಮಂದಿಯನ್ನಾದರೂ ಗ್ರೂಪ್ ಗೆ ಸೇರಿಸಬೇಕೆನ್ನುವುದು ಬಿಜೆಪಿ ಉದ್ದೇಶವಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ 1,760 ಬೂತ್ ಗಳಲ್ಲಿ 1,200 ಬೂತ್ ಗಳಲ್ಲಿ ಜಾಲತಾಣಗಳ ಅಡ್ಮಿನ್ ಗಳನ್ನು ನೇಮಕ ಮಾಡಿ ವಾಟ್ಸಪ್ ಗ್ರೂಪ್ ಗಳನ್ನು ರಚಿಸಲಾಗಿದೆ. ಇದಲ್ಲದೆ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ದಿಂದಲೂ ಪ್ರತ್ಯೇಕ ಜಾಲತಾಣದ ಗ್ರೂಪ್ ರಚಿಸಲಾಗಿದೆ.
ಈ ರೀತಿಯಾಗಿ ರಚಿಸಲಾದ ವಾಟ್ಸಫ್ ಗ್ರೂಫ್ ಗಳಲ್ಲಿ ಕೇಂದ್ರ ಸರಕಾರದ ಸಾಧನೆ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಫೋಸ್ಟ್ ಮಾಡಲಾಗುತ್ತದೆ. ಅಲ್ಲದೇ ದಿನದಲ್ಲಿ ಐದಾರು ಬಾರಿ ಈ ಗ್ರೂಪ್ ಗಳಲ್ಲಿ ಈ ವಿಚಾರಗಳು ಅಪ್ ಡೇಟ್ ಆಗುತ್ತಾ ಇರುತ್ತದೆ. ಅಲ್ಲದೆ ಬಿಜೆಪಿ ವಿರುದ್ದ ಮಾಡುವ ಆರೋಪಗಳಿಗೆ ಸೂಕ್ತ ಉತ್ತರಗಳನ್ನು ಈ ಗ್ರೂಪ್ ಗಳಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.
You must be logged in to post a comment Login