ನವದೆಹಲಿ: ವಿಶ್ವದ ಅಗ್ರಗಣ್ಯ ಗಾಯಕ ಪಾಪ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿದ್ದ ಮೈಕಲ್ ಜಾಕ್ಸನ್ ಅವರು ಇನ್ನೂ ಬದುಕಿದ್ದಾರೆ ಎಂಬ ಸುದ್ದಿ ಇದೀಗ ಜಗತ್ತಿನಾದ್ಯಂತ ಭಾರಿ ಸಂಚಲವನ್ನೇ ಸೃಷ್ಟಿ ಮಾಡಿದೆ.
ಎಲ್ಲರೂ ಅಂದುಕೊಂಡಂತೆ ಮೈಕಲ್ ಜಾಕ್ಸನ್ ಸತ್ತು 15 ವರ್ಷಗಳೆ ಸಂದಿವೆ. ಅನಾರೋಗ್ಯದಿಂದ ಜಾಕ್ಸನ್ಸಾವನ್ನಪ್ಪಿದ ಬಗ್ಗೆ ಆಗಲೇ ಸುದ್ದಿಯಾಗಿತ್ತು. ಆದರೆ ಈ ಪಾಪ್ ತಾರೆ ಮೈಕಲ್ ಜಾಕ್ಸನ್ ಇನ್ನೂ ಬದುಕಿದ್ದಾರೆ ಎಂದು ಅಮೆರಿಕನ್ ಗಾಯಕ ಅಕೊನ್ ಖಚಿತವಾಗಿ ಹೇಳಿದ್ದಾರೆ. ಜಾಕ್ಸನ್ ಅವರು ಮರಳಿ ಬರಲು ರಹಸ್ಯವಾಗಿಯೇ ತಯಾರಿ ನಡೆಸುತ್ತಿದ್ದಾರೆ. ಭರ್ಜರಿಯಾಗಿ ರೀ ಎಂಟ್ರಿ ಕೊಡಲಿದ್ದಾರೆ ಎಂದು ಅಕೊನ್ ವಾದಿಸಿದ್ದಾರೆ. ಅಕೊನ್ ಮಂಡಿಸಿದ ವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮೈಕಲ್ ಜಾಕ್ಸನ್ ಅವರ ಆರೋಗ್ಯ ಚೆನ್ನಾಗಿದೆ ಎಂದು ಅವರ ನಿಕಟವರ್ತಿಯೊಬ್ಬರು ಸಹ ಖಚಿತಪಡಿಸಿದ್ದಾರಂತೆ. ಇನ್ನೂ ನಿರ್ಮಾಪಕ ಹಾಗೂ ಜಾಕ್ಸನ್ ಅವರ ಆಪ್ತ ಟೆಡ್ಡಿ ರಿಲೇ ಸಹ ಜಾಕ್ಸನ್ ಜೀವಂತವಾಗಿರುವುದನ್ನು ಬಲವಾಗಿ ನಂಬಿದ್ದಾರೆ ಮತ್ತು ವಾಪಸ್ ಬರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಇಂದಿಗೂ ಅದೇ ನಂಬಿಕೆಯನ್ನು ಹೊಂದಿದ್ದಾರೆ. ಅಂದಹಾಗೆ ಸಿಕ್ಕಾಪಟ್ಟೆ ಹಿಟ್ ಆದ ಡೇಂಜರಸ್ ಆಲ್ಬಮ್, ರಿಲೇ ಮತ್ತು ಜಾಕ್ಸನ್ ಸಹಯೋಗದಲ್ಲೇ ಮೂಡಿಬಂದಿತ್ತು. ಮೈಕಲ್ ಜಾಕ್ಸನ್ 2009ರ ಜೂನ್ 25ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. ಜಾಕ್ಸನ್ ಸಾವನ್ನು ಸಾಕಷ್ಟು ಮಂದಿ ನಂಬಿರಲಿಲ್ಲ. ಅನಾರೋಗ್ಯದಿಂದ ಜಾಕ್ಸನ್ ರಹಸ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಹೀಗಾಗಿ ಕೆಲವರು ಜಾಕ್ಸನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಜಾಕ್ಸನ್ ಸಾವು ಇಂದಿಗೂ ರಹಸ್ಯವಾಗಿಯೇ ಉಳಿದಿರುವುದರಿಂದ ಆಗಾಗ ಅವರ ಅಸ್ತಿತ್ವ ಬಗ್ಗೆ ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಆದರೆ, ಇಂದಿಗೂ ವಾಸ್ತವ ಮೈಕಲ್ ಜಾಕ್ಸನ್ ಇಲ್ಲ ಎಂದೇ ಜನರು ನಂಬಿದ್ದಾರೆ.