LATEST NEWS
ಮಂಗಳೂರು – ಸ್ಕೂಟರ್ ನಂಬರ್ ಪ್ಲೇಟ್ ಗೆ ಪ್ಲಾಸ್ಟಿಕ್ ಕವರ್ ಮಾಡಿ ತಿರುಗಾಡುತ್ತಿದ್ದ ಸ್ಕೂಟರ್ ಸವಾರನಿಗೆ ಬಿತ್ತು 5,500 ದಂಡ

ಮಂಗಳೂರು ಎಪ್ರಿಲ್ 06: ಸ್ಕೂಟರ್ ನ ನಂಬರ್ ಪ್ಲೇಟ್ ಗೆ ಪ್ಲಾಸ್ಟಿಕ್ ಕವರ್ ಹಾಕಿ ಹೆಲ್ಮೆಟ್ ಇಲ್ಲದೆ ಮೊಬೈಲ್ ನಲ್ಲಿ ಮಾತನಾಡುತ್ತಾ ಸ್ಕೂಟರ್ ಚಲಾಯಿಸಿದ ಸವಾರನಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಮಾರ್ಚ್ 23 ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನಗರದ ಸಂಚಾರ ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಕೂಟರ್ ಹಾಗೂ ಸ್ಕೂಟರ್ ಸವಾರನ ಪತ್ತೆ ಹಚ್ಚಿದ್ದಾರೆ. ಸಂಚಾರ ನಿಯಮವನ್ನು ಉಲ್ಲಂಘಿಸಿರುವ ಕೆಎ-19-ಎಚ್‌ಟಿ-1944 ಸ್ಕೂಟರ್‌ನ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರನ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಹೆಲ್ಮೆಟ್ ಧರಿಸದೇ, ನಂಬ್ರ ಪ್ಲೇಟ್ ಮರೆಮಾಚಿರುವ ಬಗ್ಗೆ ದೋಷಪೂರಿತ ನಂಬ್ರ ಪ್ಲೇಟ್ ಬಳಕೆ, ನಿರ್ಲಕ್ಷ್ಯತನದ ಚಾಲನೆ, ಡಿ.ಎಲ್ ಇಲ್ಲದೇ ಚಾಲನೆ ಹಾಗೂ ಮೊಬೈಲ್ ಫೋನ್ ಬಳಕೆಯ ಆರೋಪದಲ್ಲಿ ಸವಾರನಿಗೆ 5,500 ರೂ. ದಂಡ ವಿಧಿಸಲಾಗಿದೆ ಎಂದು ಮಂಗಳೂರು ನಗರದ ಪೊಲೀಸರ ಪ್ರಕಟನೆ ತಿಳಿಸಿದೆ.