LATEST NEWS
ಮಂಗಳೂರು – ಮೈಸೂರು ನಡುವೆ ಪ್ರಾರಂಭವಾದ ವಿಮಾನಯಾನ….!!
ಮಂಗಳೂರು ಡಿಸೆಂಬರ್ 11: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಉಡಾನ್ ಯೋಜನೆಯಡಿ ಮಂಗಳೂರು – ಮೈಸೂರು ನಡುವಿನ ವಿಮಾನಯಾನ ಇಂದು ಆರಂಭವಾಗಿದೆ. ಮೈಸೂರಿನಿಂದ ಅಲಯನ್ಸ್ ಏರ್‌ನ ಮೊದಲ ವಿಮಾನ ಮಂಗಳೂರು ಏರ್‌ಪೋರ್ಟ್‌ಗೆ ಇಂದು ಬಂದಿಳಿಯಿತು. ಈ ಸಂದರ್ಭ ವಾಟರ್ ಸೆಲ್ಯೂಟ್ ಮೂಲಕ ವಿಮಾನಕ್ಕೆ ಭವ್ಯ ಸ್ವಾಗತ ಕೋರಲಾಯಿತು.
ಉಡಾನ್ ಯೋಜನೆಯಡಿ ಅಲಯನ್ಸ್ ಏರ್ ವಿಮಾನ ವಾರದಲ್ಲಿ ನಾಲ್ಕು ದಿನ ಮೈಸೂರು-ಮಂಗಳೂರು ನಡುವೆ ಸಂಚರಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಈ ಸೇವೆ ಲಭ್ಯವಾಗಲಿದೆ. ಮಂಗಳೂರು- ಮೈಸೂರು ನಡುವೆ 255 ಕಿ.ಮೀ ದೂರವಿದ್ದು, ಬಸ್ ಮೂಲಕ ಸಂಚಾರಕ್ಕೆ ಸುಮಾರು ಆರರಿಂದ ಏಳು ಗಂಟೆ ಕಾಲ ಬೇಕಾಗುತ್ತದೆ. ಕಾರಲ್ಲಿ ಸಂಚರಿಸುವುದಿದ್ದರೂ 5 ಗಂಟೆ ಬೇಕಾಗುತ್ತದೆ.
ಆದರೆ ಇದೀಗ ವಿಮಾನಯಾನ ಆರಂಭವಾದ ಕಾರಣ ಕೇವಲ ಒಂದು ಗಂಟೆಯಲ್ಲಿ ಬಂದರು ನಗರಿ ಮಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರನ್ನು ತಲುಪಬಹುದಾಗಿದೆ. 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30 ಕ್ಕೆ ತಲುಪಿದೆ. ಅದೇ ವಿಮಾನ 12.55ಕ್ಕೆ ಹೊರಟು ಮಧ್ಯಾಹ್ನ 1.55ಕ್ಕೆಮೈಸೂರು ತಲುಪಲಿದೆ.