LATEST NEWS
ಶಾರಾದಾ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ
ಮಂಗಳೂರು ಅಕ್ಟೋಬರ್ 03: ಮಂಗಳೂರು ದಸರಾಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಪ್ರಾರಂಭವಾಗಿದೆ.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ, ದರ್ಬಾರ್ ಸಭಾಂಗಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ನವರಾತ್ರಿ ಪ್ರಯುಕ್ತ ಶಾರದಾ ಮಾತೆಗೆ ಇದೇ 13ರವರೆಗೆ ನಿತ್ಯವೂ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರಗಳು ನಡೆಯಲಿವೆ.
ಇದೇ ಸಭಾಂಗಣದಲ್ಲಿ ಶ್ರೀಮಹಾಗಣಪತಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಶಾರದಾ ಹುಲಿವೇಷಧಾರಿಗಳ ತಂಡದವರು ಹುಲಿ ಕುಣಿತ ಸೇವೆ ಸಲ್ಲಿಸಿದರು. ಇದೆ 13 ರಂದು ಸಂಜೆ ದಸರಾ ಶೋಭಾಯಾತ್ರೆ ನಡೆಯಲಿದೆ. ಇದೆ 14ರಂದು ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.