LATEST NEWS
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಇನ್ನೋವಾ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರ ಸೆರೆ

ಮಂಗಳೂರು ಎಪ್ರಿಲ್ 12: ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸುರತ್ಕಲ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ಅವರಿಂದ 10 ಗ್ರಾಂ ಎಂಡಿಎಂಎ ನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ಆಸೀಫ್ (24) ಮತ್ತು ಅಸ್ಗರ್ ಆಲಿ(31) ಮತ್ತು ಹಳೆಯಂಗಡಿಯ ಮೊಹಮ್ಮದ್ ರಶೀಮ್(24) ಎಂದು ಗುರುತಿಸಲಾಗಿದೆ.
ಆರೋಪಿಗಳು ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಖಾಸಗಿ ಬಸ್ಸಿನಲ್ಲಿ ಪಾರ್ಸೆಲ್ ಮೂಲಕ ಸಾಗಾಟ ಮಾಡಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇನ್ನೋವಾ ಕಾರಿನಲ್ಲಿ ಮುಕ್ಕ-ಮಾಲೆಮಾರ್ ಬೀಚ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಿನಾಂಕ: 10-04-2025 ರಂದು ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇನ್ನೋವಾ ಕಾರನ್ನು ಪತ್ತೆ ಹಚ್ಚಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ 1 ಲಕ್ಷ ಮೌಲ್ಯದ 10 ಗ್ರಾಂ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ನಗದು ಹಣ ರೂ. 4000/-, 4 ಮೊಬೈಲ್ ಫೋನ್ ಗಳು, KA-31-N-6311 ಟೊಯೊಟಾ ಇನ್ನೋವಾ ಕಾರು ಸಹಿತ ಒಟ್ಟು ರೂ. 9,24,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
