LATEST NEWS
ದೆಹಲಿ – ತನ್ನ ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ದೆಹಲಿ ಸೆಪ್ಟೆಂಬರ್ 29: ವ್ಯಕ್ತಿಯೊಬ್ಬ ತನ್ನ ನಾಲ್ವರು ಪುತ್ರಿಯರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.
ಮೃತರನ್ನು ಹೀರಾಲಾಲ್ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಕಳೆದ 28 ವರ್ಷಗಳಿಂದ ವಸಂತ್ ಕುಂಜ್‌ನಲ್ಲಿರುವ ಭಾರತೀಯ ಬೆನ್ನುಮೂಳೆ ಗಾಯ ಕೇಂದ್ರದಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವರ ನಾಲ್ವರು ಪುತ್ರಿಯರನ್ನು ನೀತು (26), ನಿಕ್ಕಿ (24), ನೀರು (23) ಮತ್ತು ನಿಧಿ (20) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಪತ್ತೆಯಾದ ಶವಗಳಲ್ಲಿ ಯಾವುದೇ ಗಾಯದ ಗುರುತು ಕಂಡುಬಂದಿರಲಿಲ್ಲ. ಮನೆಯಲ್ಲಿ ಮೂರು ಪ್ಯಾಕೆಟ್ ಸೆಲ್ಫೋಸ್ ವಿಷ, ಐದು ಲೋಟಗಳು ಮತ್ತು ಒಂದು ಚಮಚದಲ್ಲಿ ಅನುಮಾನಾಸ್ಪದ ದ್ರವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ವ್ಯಕ್ತಿಯ ಇಬ್ಬರು ಕಿರಿಯ ಹೆಣ್ಣುಮಕ್ಕಳು ವಿಕಲಚೇತನರಾಗಿದ್ದರು ಎಂದು ಪೊಲೀಸರು ಹೇಳಿದರೆ, ನಾಲ್ವರೂ ದೈಹಿಕವಾಗಿ ವಿಕಲಾಂಗರು ಎಂದು ನೆರೆಹೊರೆಯವರು ಹೇಳಿದ್ದಾರೆ.ಈ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ರೋಹಿತ್ ಮೀನಾ ಹೇಳಿದ್ದಾರೆ.
You must be logged in to post a comment Login